ಪ್ಯಾರಿಸ್: ಒಲಿಂಪಿಕ್ಸ್ ನಲ್ಲಿ ಮೂರನೇ ಪದಕ ಗೆಲ್ಲುವ ಸುವರ್ಣಾವಕಾಶ ಹೊಂದಿದ್ದ ಭಾರತದ ಶೂಟರ್ ಮನು ಭಾಕರ್ ಗೆ ಇಂದು ಕೂದಲೆಳೆಯ ಅಂತರದಲ್ಲಿ ಮಿಸ್ ಆಗಿ ಹೋಯ್ತು.
ಈಗಾಗಲೇ 10 ಮೀ ಏರ್ ಪಿಸ್ತೂಲ್ ವಿಭಾಗದ ಮಹಿಳೆಯರ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಇಂದು 25 ಮೀ. ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಸುತ್ತಿಗೆ ಆಯ್ಕೆಯಾಗಿ ಮೂರನೇ ಪದಕ ಗೆದ್ದು ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದ್ದರು.
ಆದರೆ ಇಂದು ನಡೆದ ಫೈನಲ್ ಸುತ್ತಿನಲ್ಲಿ ಮನು ಭಾಕರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ಮೂರನೇ ಪದಕ ಜಸ್ಟ್ ಮಿಸ್ ಆಗಿದೆ. ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದ್ದ ಮನು ಭಾಕರ್ ಕೊನೆಯ ಹಂತದಲ್ಲಿ ಏಕಾಗ್ರತೆ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.
ಇಂದು ಪ್ಯಾರಿಸ್ ಒಲಿಂಪಿಕ್ಸ್ ನ 8 ನೇ ದಿನವಾಗಿದ್ದು ಭಾರತ ಇದುವರೆಗೆ ಒಟ್ಟು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಆ ಪೈಕಿ ಎರಡೂ ಪದಕಗಳನ್ನು ಮನು ಭಾಕರ್ ಗೆದ್ದುಕೊಂಡಿದ್ದಾರೆ. ಇಂದು ಭಾರತ ಆರ್ಚರಿ ತಾರೆ ದೀಪಿಕಾ ಕುಮಾರಿ ಮೇಲೆ ಎಲ್ಲರ ನಿರೀಕ್ಷೆಯಿದೆ.