ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಮಂಗಳವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಜರ್ಮನಿಯ ವಿರುದ್ಧ 2-3 ಗೋಲುಗಳಿಂದ ಸೋಲು ಕಂಡಿದೆ.
ಈ ಸೋಲಿನಿಂದಾಗಿ ಒಲಿಂಪಿಕ್ ಕೂಟದಲ್ಲಿ 44 ವರ್ಷಗಳ ನಂತರ ಫೈನಲ್‌ಗೆ ಪ್ರವೇಶಿಸುವ ಭಾರತ ತಂಡದ ಕನಸು ಕಮರಿತು. ಹೀಗಾಗಿ, ಗುರುವಾರ ಕಂಚಿನ ಪದಕಕ್ಕಾಗಿ ಸ್ಪೇನ್ ಜೊತೆ ಸೆಣಸಾಟ ನಡೆಸಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಭಾರತ ಕಂಚು ಗೆದ್ದಿತ್ತು.
ಸೆಮಿಫೈನಲ್ ಹಣಾಹಣಿಯಿಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಸುಖಜೀತ್ ಸಿಂಗ್ ಗೋಲು ಗಳಿಸಿದರು. ಜರ್ಮನಿಯ ಪರ ಗೋಂಜಾಲೊ ಪೀಲತ್ , ಕ್ರಿಸ್ಟೋಫರ್ ರೂರ್ ಮತ್ತು ಮಾರ್ಕೊ ಮಿಲ್ಕಾವು ಗೋಲು ಹೊಡೆದರು.
ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ವೀರಾವೇಶದಿಂದ ಹೋರಾಡಿ ಗೆದ್ದಿದ್ದ ಭಾರತ ತಂಡವು ಇಲ್ಲಿಯೂ ಉತ್ತಮ ಆರಂಭ ಪಡೆಯಿತು. ಆದರೆ, ನಂತರ ಜರ್ಮನಿ ಮೇಲುಗೈ ಸಾಧಿಸಿತು.