ಪ್ಯಾರಿಸ್: ವಿನೇಶ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ. ಮಂಗಳವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಗೆದ್ದು ಚಿನ್ನಕ್ಕೆ ಹತ್ತಿರವಾಗಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆಯುವ ತವಕದಲ್ಲಿದ್ದಾರೆ. ಬುಧವಾರ ರಾತ್ರಿ ಫೈನಲ್‌ನಲ್ಲಿ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಅಮೆರಿಕಾದ ಸೆರಾ ಅವರನ್ನು ಎದುರಿಸಲಿದ್ದಾರೆ.
ಪೋಗಟ್ ಅವರು ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ ಭಾರತದ ವಿನೇಶಾ 5-0 ಅಂತರದಲ್ಲಿ ಸುಲಭ ಜಯಗಳಿಸಿದರು. ಈ
ಈ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಭಾರತದ ಎರಡನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಸುಶೀಲ್ ಕುಮಾರ್ ಅವರು ಫೈನಲ್ ತಲುಪಿದ್ದರು.
ಇದಕ್ಕೂ ಮೊದಲು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪೋಗಟ್ ಅವರು 3-2ರಿಂದ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರಿಗೆ ಆಘಾತ ನೀಡಿದರು. ಈ ಅಚ್ಚರಿಯ ಫಲಿತಾಂಶದ ನಂತರ ವಿನೇಶಾ ಕ್ವಾರ್ಟರ್‌ಫೈನಲ್‌ನಲ್ಲಿ ಯುರೋಪಿನ ಮಾಜಿ ಚಾಂಪಿಯನ್, ಉಕ್ರೇನಿನ ಒಕ್ಸಾನಾ ಲಿವಾಚ್ ಅವರ ಸವಾಲನ್ನು 7-5 ರಿಂದ ಬದಿಗೊತ್ತಿ ಮೊದಲ ಬಾರಿ ಸೆಮಿಫೈನಲ್ ತಲುಪಿದರು.
ಕಳೆದ ವರ್ಷ ಭಾರತ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಧರಣಿ ನಡೆಸಿದ್ದರು. ಆ ಹೋರಾಟದಲ್ಲಿ ವಿನೇಶ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.