ನವದೆಹಲಿ: ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡು ಪದಕ ಗೆದ್ದು ಹೆಮ್ಮೆ ತಂದ ಶೂಟರ್ ಮನು ಭಾಕರ್ ಈಗ ಮೂರನೇ ಪದಕವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದಾರೆ. ಹಾಗಿದ್ದರೂ ಎರಡು ಪದಕಗಳನ್ನು ಒಂದೇ ಒಲಿಂಪಿಕ್ಸ್ ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಇಂದು ಮನು ಭಾಕರ್ 25 ಮೀ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಪಂದ್ಯ ಆರಂಭಕ್ಕೂ ಮುನ್ನವೇ ಅವರು ದೇಶದ ಜನತೆಗೆ ಒಂದು ಮಾತು ಹೇಳಿದ್ದರು. ನನಗೆ ಈ ಪದಕ ಗೆಲ್ಲಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನಷ್ಟೇ. ಒಂದು ವೇಳೆ ಪದಕ ಗೆಲ್ಲಲು ಸಾಧ್ಯವಾಗದೇ ಇದ್ದರೂ ನನ್ನನ್ನು ಮೊದಲಿನಂತೇ ಪ್ರೀತಿಸಿ ಎಂದು ಮನವಿ ಮಾಡಿದ್ದರು.
ಮನು ಭಾಕರ್ 10 ಮೀ. ಪಿಸ್ತೂಲ್ ವಿಭಾಗದಲ್ಲಿ ಪರಿಣತರು. 25 ಮೀ. ವಿಭಾಗ ಅವರಿಗೆ ಅಷ್ಟೊಂದು ಪರಿಚಿತವಲ್ಲ. ಹಾಗಿದ್ದರೂ ಸ್ಪರ್ಧೆ ಮಾಡಿ ಫೈನಲ್ ಸುತ್ತಿಗೆ ಅರ್ಹತೆ ಪಡೆದು ಕೊನೆಗೆ ನಾಲ್ಕನೇ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಈ ಕಾರಣಕ್ಕೆ ಅವರನ್ನು ದೇಶವೇ ಅಭಿನಂದಿಸುತ್ತಿದೆ.
ಈ ಪಂದ್ಯದ ಬಳಿಕ ಮಾತನಾಡಿದ ಅವರನ್ನು ಭಾರತಕ್ಕೆ ಮರಳಿದ ತಕ್ಷಣ ನೀವು ಏನು ಮಾಡಬೇಕೆಂದಿದ್ದೀರಿ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮನು ಮೊದಲು ಚೆನ್ನಾಗಿ ಊಟ ಮಾಡಬೇಕು. ಇಷ್ಟು ದಿನ ಕಠಿಣ ತರಬೇತಿ ನಡುವೆ ಸರಿಯಾಗಿ ಊಟ-ತಿಂಡಿಯ ಕಡೆಗೂ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಅಮ್ಮನ ಆಲೂ ಪರಾಠ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮನೆಗೆ ಹೋದ ತಕ್ಷಣ ಅಮ್ಮನಿಗೆ ಆಲೂ ಪರಾಠ ಮಾಡಿಕೊಡಲು ಹೇಳುವೆ ಎಂದು ಬೇಡಿಕೆಯಿಟ್ಟಿದ್ದಾರೆ.
ಇತ್ತ ಮನು ಭಾಕರ್ ತಾಯಿ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಆಕೆ ಯಾವಾಗ ಬರುತ್ತಾಳೆ ಗೊತ್ತಿಲ್ಲ. ಬಂದ ತಕ್ಷಣ ಬಿಸಿ ಬಿಸಿಯಾಗಿ ಆಲೂ ಪರಾಠ ಮಾಡಿಕೊಡುತ್ತೇನೆ. ಅದು ತಣ್ಣಗಾದರೆ ಚೆನ್ನಾಗಿರಲ್ಲ. ಮಗಳನ್ನು ಸ್ವಾಗತಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಅದು ಆಕೆಗೊಂದು ಸರ್ಪೈಸ್ ಆಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.