ಹರಿಯಾಣ: ತೂಕ ಹೆಚ್ಚಳದಿಂದ ಒಲಿಂಪಿಕ್ಸ್‌ನಲ್ಲಿ ಫೈನಲ್ ಕುಸ್ತಿ ಪಂದ್ಯಾಟಕ್ಕೆ ಅನರ್ಹಗೊಂಡಿರುವ ವಿನೇಶ್ ಭೋಗಟ್ ಅವರನ್ನು ಹರಿಯಾಣ ಸರ್ಕಾರವು ಪದಕ ವಿಜೇತರಂತೆ ಸನ್ಮಾನಿಸಲಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಗುರುವಾರ ಹೇಳಿದ್ದಾರೆ.
ತನ್ನ ಕ್ರೀಡಾ ನೀತಿಯ ಪ್ರಕಾರ, ಹರಿಯಾಣ ಸರ್ಕಾರವು ಒಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಿಗೆ ₹ 6 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹ 4 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ ₹ 2.5 ಕೋಟಿ ನೀಡುತ್ತದೆ.
ಅದರಂತೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಿಗೆ ರಾಜ್ಯ ಸರ್ಕಾರ ನೀಡುವ ಅದೇ ಬಹುಮಾನವನ್ನು ವಿನೇಶ್ ಭೋಗಟ್ ಅವರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಎಕ್ಸ್ ಪೋಸ್ಟ್‌ನಲ್ಲಿ ನಯಾಬ್ ಸಿಂಗ್ ಸೈನಿ ಅವರು ಈ ಸಂಬಂಧ ಬರೆದುಕೊಂಡಿದ್ದಾರೆ , 'ಹರಿಯಾಣದ ನಮ್ಮ ಕೆಚ್ಚೆದೆಯ ಮಗಳು ವಿನೇಶ್ ಫೋಗಟ್ ಅದ್ಭುತ ಪ್ರದರ್ಶನ ನೀಡಿ ಒಲಿಂಪಿಕ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕೆಲವು ಕಾರಣಗಳಿಂದ ಅವಳು ಫೈನಲ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರಬಹುದು ಆದರೆ ಅವಳು ನಮಗೆಲ್ಲ ಚಾಂಪಿಯನ್ ಆಗಿದ್ದಾಳೆ. ವಿನೇಶ್ ಫೋಗಟ್ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ವಿಜೇತರಿಗೆ ಹರಿಯಾಣ ಸರ್ಕಾರ ನೀಡುವ ಎಲ್ಲಾ ಗೌರವ, ಬಹುಮಾನ ಮತ್ತು ಸೌಲಭ್ಯಗಳನ್ನು ವಿನೇಶ್ ಫೋಗಟ್‌ಗೂ ನೀಡಲಾಗುವುದು ಎಂದು ಬರೆದುಕೊಂಡಿದ್ದಾರೆ..