ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಪಾಕಿಸ್ತಾನ ತಂಡ ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿದೆ. ಪಾಕ್‌ನ 149ರನ್‌ಗಳಿಗೆ ಉತ್ತರಿಸಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕ್ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್(51ರನ್, 2ವಿಕೆಟ್) ಎರಡರಲ್ಲೂ ಮಿಂಚಿದ ಶಾಹಿದ್ ಆಫ್ರಿದಿ ಗೆಲುವಿನ ಪ್ರಮುಖ ರೂವಾರಿಯಾದರು.
PTI
PTI
ಟಾಸ್ ಗೆದ್ದ ಪಾಕ್ ತಂಡ ಆರಂಭದಲ್ಲೇ ವೇಗದಲ್ಲಿ ರನ್ ಪೇರಿಸ ತೊಡಗಿತ್ತಾದರೂ ಮತ್ತೊಂದೆಡೆಯಿಂದ ವಿಕೆಟ್‌ಗಳು ಉರುಳತೊಡಗಿದವು. ಓಪನರ್ ಕರ್ಮಾನ್ ಅಕ್ಮಲ್ 12ಎಸೆತಗಳಲ್ಲಿ ಬಿರುಸಿನ 23(4 ಬೌಂಡರಿ,1ಸಿಕ್ಸರ್)ರನ್ ಗಳಿಸಿದರು. ಆದರೆ ಮತ್ತೊಬ್ಬ ಓಪನರ್ ಶಾಹಜೈಬ್ ಹಸನ್ ಶೂನ್ಯಕ್ಕೆ ಮರಳಿ ನಿರಾಸೆ ಮೂಡಿಸಿದರು.
ಕ್ರಮಾಂಕದಲ್ಲಿ ಭಡ್ತಿ ಪಡೆದು ಒನ್ ಡೌನ್ ಆಗಿ ಕ್ರೀಸಿಗಿಳಿದ ಶಾಹಿದ್ ಆಫ್ರಿದಿ ಆರಂಭದಲ್ಲೇ ಸ್ಫೋಟಕ ಆಟಕ್ಕಿಳಿದರು. ಮೈದಾನದ ಎಲ್ಲಾ ದಿಕ್ಕುಗಳಿಗೂ ನಿರ್ದಯವಾಗಿ ಚೆಂಡನ್ನು ಅಟ್ಟಿದ ಆಫ್ರಿದಿ 34 ಎಸೆತಗಳಲ್ಲಿ 51ರನ್ ಬಾರಿಸಿದಾಗ ಸ್ಪಿನ್ನರ್ ಡುಮಿನಿ ಎಸೆತಕ್ಕೆ ಎ ಡಿ ವಿಲಿಯರ್ಸ್‌ಗೆ ಕ್ಯಾಚಿತ್ತು ಮರಳಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಸೇರಿದ್ದವು.
ಆಫ್ರಿದಿಗೆ ಉತ್ತಮ ಬೆಂಬಲ ನೀಡಿದ ಶೋಯಿಬ್ ಮಲಿಕ್ 39 ಎಸೆತದಲ್ಲಿ 34ರನ್ ಗಳಿಸಿದರು. ಕೊನೆಯ ಹಂತದಲ್ಲಿ ನಾಯಕ ಯೂನಿಸ್ ಖಾನ್ 24 ಹಾಗೂ ಅಬ್ದುಲ್ ರಜಾಕ್ 12ರನ್ ಗಳಿಸಿ ಔಟಾಗದೆ ಉಳಿದರು. ಒಟ್ಟಾರೆ ಪಾಕ್ 20 ಓವರ್‌ಗಳಲ್ಲಿ 149ರನ್ ಗಳಿಸಿತು. ಆಫ್ರಿಕಾ ಪರ ಸ್ಟೈನ್, ಪಾರ್ನೆಲ್, ಮೆರ್ವೆ ಹಾಗೂ ಡುಮಿನಿ ತಲಾ ಒಂದೊಂದು ವಿಕೆಟ್ ಕಿತ್ತರು.
150ರ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಸ್ಮಿತ್ ಹಾಗೂ ಕಾಲಿಸ್ ಸೇರಿಕೊಂಡು ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 40ರನ್ ಒಟ್ಟು ಸೇರಿಸಿದರು. ಆದರೆ ಸ್ಮಿತ್ ಔಟಾದ ಕೂಡಲೇ ಹರಿಣಗಳ ಕುಸಿತವು ಆರಂಭವಾಯಿತು. ಆಫ್ರಿದಿ ಕೈಚಳಕಕ್ಕೆ ಸಿಲುಕಿದ ಹರ್ಷಲ್ ಗಿಬ್ಸ್(5) ಹಾಗೂ ಎ ಬಿ ಡಿ ವಿಲಿಯರ್ಸ್(1) ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಪಾಲ್ ಡುಮಿನಿ ಜತೆ ಸೇರಿ ಕಾಲಿಸ್ ಹೋರಾಟ ನಡೆಸಿದರೂ ದಕ್ಷಿಣ ಆಫ್ರಿಕಾದ ಗೆಲುವಿನ ದಟ ದಾಟಲು ಅದು ಸಹಕಾರಿಯಾಗಲಿಲ್ಲ. 54ಎಸೆತ ಎದುರಿಸಿದ ಕಾಲಿಸ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 64ರನ್ ಗಳಿಸಿದರು. ಪಂದ್ಯದ ಅಂತಿಮ ಕ್ಷಣವರೆಗೂ ಹೋರಾಟ ನಡೆಸಿದ ಜೆ ಪಿ ಡುಮಿನಿ 39 ಎಸೆತಗಳಲ್ಲಿ 44ರನ್ ಗಳಿಸಿ ಅಜೇಯರಾಗುಳಿದರು. ಕೊನೆಗೆ ಬಂದ ಬೌಚರ್ ಎದುರಿಸಿದದ್ದು ಕೇವಲ ಎರಡು ಎಸೆತ. ಆದರೆ ಅವರಿಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ನಲ್ಲಿ 5ವಿಕೆಟ್ ನಷ್ಟಕ್ಕೆ 142ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪಾಕಿಸ್ತಾನ ಏಳು ರನ್‌ಗಳ ರೋಚಕ ಜಯ ದಾಖಲಿಸಿತು.
ಬ್ಯಾಟಿಂಗ್‌ನಲ್ಲಿ ಸ್ಫೋಟಕ 51ರನ್ ಹಾಗೂ ಬೌಲಿಂಗ್‌ನಲ್ಲಿ ಪ್ರಮುಖ ಎರಡು ವಿಕೆಟ್ ಕಿತ್ತು ಮಿಂಚಿದ ಪಾಕಿಸ್ತಾನದ ಆಲ್‌ರೌಂಡರ್ ಆಟಗಾರ ಶಾಹಿದ್ ಆಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.
ಈ ಮೂಲಕ ನಾಕೌಟ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಎಡವಿ ಬೀಳುವ ಪರಿ ಮುಂದುವರಿದಿದೆಯಲ್ಲದೆ ಅದರ ವಿಶ್ವಕಪ್ ಫೈನಲ್ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಟೂರ್ನಿಯ ಎರಡನೇ ಸೆಮಿಫೈನಲ್ ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ಇಂದು ನಡೆಯಲಿದ್ದು, ವಿಜೇತ ತಂಡವನ್ನು ಪಾಕಿಸ್ತಾನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆಯುವ ಫೈನಲ್ ಮುಖಾಮುಖಿಯಲ್ಲಿ ಎದುರಿಸಲಿದೆ.