ಬೆಂಗಳೂರು: ಯೋಗ ಮಾಡುವುದರಿಂದ ದೇಹಕ್ಕೆ ಕಸರತ್ತಿನ ಜೊತೆಗೆ ಮನಸ್ಸೂ ಶಾಂತವಾಗುತ್ತದೆ. ಹಾಗಿದ್ದರೆ ಇಂದು ಒತ್ತಡ ನಿವಾರಣೆಗೆ ಯಾವ ಯೋಗ ಸೂಕ್ತ ಎಂದು ನೋಡೋಣ.
ನಮ್ಮ ದೈನಂದಿನ ಜೀವನದ ಒತ್ತಡದಿಂದಾಗಿ ಅನೇಕರು ಇಂದು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಮಾನಸಿಕವಾಗಿ ಒತ್ತಡ, ಆತಂಕ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಇದು ನಿಯಂತ್ರಣ ಹಂತದಲ್ಲಿದ್ದರೆ ಇನ್ನು ಕೆಲವರಿಗೆ ವೈದ್ಯರ ಸಹಾಯ ಬೇಕಾಗುತ್ತದೆ.
ಮಾನಸಿಕ ಒತ್ತಡ ಮತ್ತು ಆತಂಕ ನಿವಾರಿಸಲು ಯೋಗ ಸಹಾಯಕವಾಗುತ್ತದೆ. ಇದಕ್ಕೆ ಹಲವು ಯೋಗಾಸನಗಳಿದ್ದು, ಅವುಗಳಲ್ಲಿ ಒಂದು ಸೇತುಬಂಧಾಸನ. ಸೇತು ಬಂಧಾಸನದಿಂದ ಅನೇಕ ಉಪಯೋಗಗಳಿವೆ. ಅದರಲ್ಲಿ ಪ್ರಮುಖವಾದುದು ಒತ್ತಡ ಮತ್ತು ಆತಂಕ ನಿವಾರಣೆ. ಈ ಯೋಗ ಮಾಡುವ ವಿಧಾನ ಇಲ್ಲಿದೆ.
ಸಮತಟ್ಟಾದ ನೆಲದ ಮೇಲೆ ಬೆನ್ನು ತಾಗಿಸಿ ಮಲಗಿ. ಬಳಿಕ ಮೊಣಕಾಲುಗಳನ್ನು ಎತ್ತಿ ಪಾದಗಳು ನೆಲಕ್ಕೆ ತಾಗುವಂತೆ ಸೊಂಟವನ್ನು ಕೊಂಚ ಮೇಲೆತ್ತಿ. ನಿಮ್ಮ ಎರಡೂ ಕೈಗಳನ್ನು ನೆಲದ ಮೇಲಿಡಿ. ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಸೊಂಟವನ್ನು ಮೇಲೆತ್ತಿ. ಮೊಣಕಾಲುಗಳನ್ನು ಕೊಂಚ ಮುಂದಕ್ಕೆ ಬಾಗಿಸಿ. ಕೈಗಳನ್ನು ನೆಲಕ್ಕೆ ಒತ್ತಿ ಎದೆಯ ಭಾಗವನ್ನು ಮೇಲೆತ್ತಿ. ಇದೇ ರೀತಿ 4-8 ಬಾರಿ ಉಸಿರು ತೆಗೆದುಕೊಳ್ಳುತ್ತಾ ಪ್ರತಿನಿತ್ಯ ಮಾಡುತ್ತಿದ್ದರೆ ನಿಮ್ಮ ಮನಸ್ಸಿನ ಒತ್ತಡ, ಆತಂಕ ಇತ್ಯಾದಿ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ.