ವೆಬ್‌ದುನಿಯಾ ವಾರದ ಬ್ಲಾಗ್: ಇಸ್ಮಾಯಿಲ್

-ಉದಯಸಿಂಹ

ಬರೆವ ಬದುಕಿನ ತಲ್ಲಣ' - ಇದು ಬ್ಲಾಗೊಂದರ ಚಿತ್ರಣ. ಇಸ್ಮಾಯಿಲ್ ಅವರ ಬ್ಲಾಗ್ (ismail.in) ನೋಡಿ ಬ್ಲಾಗ್ ಪ್ರತಿಸ್ಪರ್ಧಿಗಳು ತಲ್ಲಣಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಉದಯವಾಣಿಯ ಹಿರಿಯ ಪತ್ರಕರ್ತ ಇಸ್ಮಾಯಿಲ್ ಅವರ ಈ ಬ್ಲಾಗ್ ಈವರೆಗೆ ನಮ್ಮ ಕಣ್ಣಿಗೆ ಬಿದ್ದ ಕನ್ನಡ ಬ್ಲಾಗ್‌ಗಳಲ್ಲಿ ಅತ್ಯುತ್ತಮದ್ದೆಂದು ಹೇಳಬಹುದು. ಸಂಪದದಲ್ಲಿ ಇಸ್ಮಾಯಿಲ್ ತೆರೆದಿರುವ ಈ ಬ್ಲಾಗ್ ನೋಡಲು ಸುಂದರವೂ ಕೂಡ. ಅವರ ಬರವಣಿಗೆಯು ನಿಮಗೆ ಇನ್ನಷ್ಟು ಮೋಡಿ ಉಂಟುಮಾಡಲು ಈ ತಾಣದ ರೂಪು ಕೂಡ ಒಂದು ಕೈಸೇರಿಸುತ್ತದೆ.

ವೆಬ್‌ದುನಿಯಾದ ವಾರದ ಬ್ಲಾಗ್‌ಗಾಗಿ ಲೇಖನ ಮಾಡಲು ಈ ಬ್ಲಾಗನ್ನು ತೆರೆದಾಗ ಮುಖಪುಟ ಮೊದಲ ಸರದಿಯಲ್ಲಿ ಇದ್ದದ್ದು "ಲೈಂಗಿಕ ವೃತ್ತಿ ನಿರತಳ ಎರಡು ರಾತ್ರಿಗಳು" ಎಂಬ ಲೇಖನ. ಲೈಂಗಿಕ ವೃತ್ತಿ, ರಾತ್ರಿ ಎಂದೆಲ್ಲಾ ದೊಡ್ಡಕ್ಷರಗಳಲ್ಲಿ ಹಾಕಿ ಓದುಗರನ್ನು ಸೆಳೆಯುವ ಒಂದು ಗಿಮಿಕ್ ಎಂಬ ಅನಿಸಿಕೆ ಮೊದಲು ಮನಸಿಗೆ ಮೂಡಿತ್ತು. ಆದರೆ ಲೇಖನ ಓದುತ್ತಾ ಹೋದಂತೆ ಇಸ್ಮಾಯಿಲ್ ಅವರ ಭಾಷಾ ಮೋಡಿಯು ಬುದ್ಧಿಯನ್ನು ಹಿಡಿದಿಟ್ಟಿತು. ಲೈಂಗಿಕ ಕಾರ್ಯಕರ್ತೆಯಾಗಿದ್ದಾಗಿ ಅನುಭವಗಳ ಬಗ್ಗೆ ಒಂದು ಪುಸ್ತಕ ಬರೆದು ಕೇರಳದಾದ್ಯಂತ ಭಾರೀ ಜನಪ್ರಿಯಳಾದ ನಳಿನಿ ಜಮೀಲಾಗೆ ಸಂಬಂಧಿತ ಲೇಖನ ಇದು. ನಳಿನಿ ಅವರ ಆತ್ಮಕತೆಯಲ್ಲಿನ ಒಂದು ಭಾಗವಷ್ಟೇ ಈ ಲೇಖನ. ಆದರೂ ವೇಶ್ಯೆಯೊಬ್ಬಳ ಮನಸ್ಸಿನಲ್ಲಿ ಏಳುವ ಭಾವನೆಗಳು ಈ ಲೇಖನದಲ್ಲಿ ಬಹುಚೆನ್ನಾಗಿ ಅಭಿವ್ಯಕ್ತಗೊಂಡಿವೆ. ಈ ಲೇಖನವನ್ನು ಮಲಯಾಳಂನಿಂದ ಕನ್ನಡಕ್ಕೆ ಅನುವಾದ ಮಾಡಿದ್ದರೂ ಇಸ್ಮಾಯಿಲ್ ಅವರ ನುಡಿಗಳಲ್ಲಿ ಭಾಷಾಂತರದ ಕರಿಛಾಯೆ ಇಣುಕುವುದಿಲ್ಲ.

ಅಂತರ್ಜಾಲದಲ್ಲಿ ಕನ್ನಡಕ್ಕಾಗಿ ತಹತಹಿಸುವ ಗುಂಪಿಗೆ ಚರ್ಚೆ ನಡೆಸಲು ಇಸ್ಮಾಯಿಲ್ ಅವರು ಒಂದು ಆಹಾರ ಒದಗಿಸಿದ್ದಾರೆ. ಕನ್ನಡದಲ್ಲಿ ಮೊಟ್ಟೆ ದೋಸೆ ಬದಲು ಆಮ್ಲೆಟ್ ಬೇಕು, ಸಿಗಡಿಯ ಬದಲು ಪ್ರಾನ್ ಬೇಕು, ಕೋಳಿ ಪಲ್ಯದ ಬದಲು ಚಿಕನ್ ಕಬಾಬ್ ಬೇಕು ಎಂದು ಇಸ್ಮಾಯಿಲ್ ಅವರು "ಕನ್ನಡವೆಂಬ ಸಸ್ಯಾಹಾರಿ ಭಾಷೆ" ಎಂಬ ಅಭಿಲಾಷೆ ತೋರಿಸಿಕೊಂಡಿದ್ದಾರೆ. ಮೀನು, ಕೋಳಿಗೂ ಅಂತರ್ಜಾಲದಲ್ಲಿ ಕನ್ನಡಕ್ಕೂ ಏನು ಸಂಬಂಧ ಎಂಬ ಯೋಚನೆಯೇ? ಕೋಳಿ ಪಲ್ಯ ಎಂಬ ಪದ ಕೆಲ ಮಂದಿಗಷ್ಟೇ ತಿಳಿದಿರುತ್ತದೆ. ಚಿಕನ್ ಕಬಾಬ್ ಹೆಸರು ಸರ್ವವ್ಯಾಪಿ. ಕಬಾಬ್ ಅನ್ನೇ ಎಲ್ಲರೂ ಬಯಸುತ್ತಾರೆ. ಹೀಗೆಯೇ, ಕಂಪ್ಯೂಟರನಲ್ಲಿ ಅನಗತ್ಯ ಮಡಿವಂತಿಕೆ ಮಾಡುವುದು ಸಲ್ಲದು. ಅಲ್ಲಿ ಈಗಾಗಲೇ ರೂಢಿಗತವಾಗಿರುವ ಪದಗಳನ್ನೇ ಬಳಸುವುದು ಸೂಕ್ತ ಎಂಬುದು ಇಸ್ಮಾಯಿಲ್ ಅವರ ವಾದ. ಫೈಲ್, ಎಡಿಟ್ ಮೊದಲಾದ ಅಭ್ಯಾಸವಾದ ಪದಗಳನ್ನು ಕಡತ, ಸಂಪಾದನೆ ಎಂದು ಹೇಳುವುದು ಅಷ್ಟು ಉಪಯುಕ್ತವಲ್ಲ ಎಂದೂ ಅವರು ಹೇಳುತ್ತಾರೆ.

"ಹೀಗಿರುವಾಗ ಕಂಪ್ಯೂಟರನ್ನು ಮಾತ್ರ ಗಣಕಯಂತ್ರವಾಗಿಸಿ, ‘ಕಡತ’ ‘ತೆರೆ’ದು ‘ಸಂಪಾದಿಸಿ’ ‘ಉಳಿಸಿ’ ಕನ್ನಡಿಗರಿಗೆ ‘ಸಹಾಯ’ ಮಾಡಿ ‘ನಿರ್ಗಮಿಸು’ವುದಕ್ಕೆ ಏನಾದರೂ ಅರ್ಥವಿದೆಯೇ?"

ಇಸ್ಮಾಯಿಲ್ ಅವರ ಈ ಪ್ರಶ್ನೆಗೆ ಉತ್ತರ? ಅಂತರ್ಜಾಲ ಬಳಕೆದಾರರು... ಅಲ್ಲಲ್ಲ... ಇಂಟರ್ನೆಟ್ ಯೂಸರ್‌ಗಳೇ ಹೇಳಬೇಕು.

ಕನ್ನಡದಲ್ಲಿ ಮುಸ್ಲಿಂ ಬರಹಗಾರರು ಬಹಳ ಕಡಿಮೆಯಿರುವುದರಿಂದ (ಅವರ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ) ಇಸ್ಮಾಯಿಲ್ ಅವರ ಬಗ್ಗೆ ಸಣ್ಣ ಕುತೂಹಲ ಇರುವುದು ಸಹಜ. ಮುಸ್ಲಿಂ ಬರಹಗಾರರು ಬರೆಯುವ ವಿಚಾರಗಳು ಅವರ ಸಮುದಾಯದ ಅಭಿವ್ಯಕ್ತಿಗಳೆಂದು ಇತರ ಜನರು ಗುರುತಿಸುವ ಮನಸ್ಥಿತಿ ನೆಲೆನಿಂತುಬಿಟ್ಟಿದೆ. ಇದೇ ಗೊಂದಲವನ್ನು ಇಸ್ಮಾಯಿಲ್ ಅವರು ಈ ಬ್ಲಾಗಿನ ಒಂದು ಲೇಖನದಲ್ಲಿ ("ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೇ?") ತೋಡಿಕೊಂಡಿದ್ದಾರೆ.

ಮುಸ್ಲಿಮೇತರರ ಧರ್ಮದ ವಿಷಯದಲ್ಲಿ ತಲೆಹಾಕುವ ಮಂದಿ ಮುಸ್ಲಿಂ ವಿಚಾರಗಳಿಗೆ ಮೂಗು ತೂರಿಸಿದರೆ ಅವರನ್ನು ಮುಸ್ಲಿಮರು ಬಿಟ್ಟಾರೆಯೇ ಎಂಬುದು ಹಲವು ಜನರು ಆಗಾಗ ಕೇಳುವ ಪ್ರಶ್ನೆಯಾಗಿದೆ. ಇದು ಹೌದಿರಬಹುದೆಂದು ಇಸ್ಲಾಯಿಲರಿಗೂ ಅನಿಸಿತಂತೆ. ಆದರೆ ಒಂದೊಂದು ಘಟನೆಗಳನ್ನು ಎಳೆ ಎಳೆಯಾಗಿ ಅವರು ಬಿಡಿಸಿದಾಗ ಅದು ಜನರ ಪೂರ್ವಗ್ರಹ ಭಾವನೆ ಎಂಬುದನ್ನು ಮನಗಂಡಿರುವುದಾಗಿ ಇಸ್ಮಾಯಿಲ್ ಈ ಲೇಖನದಲ್ಲಿ ಬಹುಸೊಗಸಾಗಿ ವಿವರಿಸಿದ್ದಾರೆ.

ಇಸ್ಮಾಯಿಲ್ ಅವರ ಈ 'ಬರೆವ ಬದುಕಿನ ತಲ್ಲಣ' ಬ್ಲಾಗ್ ಉತ್ತಮ ಗುಣಮಟ್ಟದ ಬರಹಗಾರರೊಬ್ಬರ ಉತ್ತಮ ಗುಣಮಟ್ಟದ ಬ್ಲಾಗ್‌ನ ಒಂದು ಮಾದರಿಯಾಗಿದೆ. ನಿಮ್ಮ ಘಳಿಗೆ ಅಮೂಲ್ಯವಾಗಿದ್ದರೆ ಈ ಬ್ಲಾಗ್ ಭೇಟಿ ಅದನ್ನು ವ್ಯರ್ಥಗೊಳಿಸುವುದಿಲ್ಲ. ಇಸ್ಮಾಯಿಲ್ ಅವರಿಗೆ ವೆಬ್‌ದುನಿಯಾದಿಂದ ನಮನಗಳು.

ವೆಬ್ದುನಿಯಾವನ್ನು ಓದಿ