ಸೆನ್ಸೆಕ್ಸ್ ಸಿಂಹಾವಲೋಕನ: ಗೂಳಿ ಮುಂದೆ ಕರಗಿದ ಕರಡಿ

PTI
ಪ್ರಭುಪ್ರಸಾದ್ ಬಂಡಿ

ಅಲ್ಲಿ ಸಾವಿರಗಳಿಗೆ ಲೆಕ್ಕವಿಲ್ಲ.. ಲಕ್ಷವೆಂದರೆ ಅಲಕ್ಷ್ಯ..! ಇಲ್ಲೇನಿದ್ದರೂ ಕೋಟಿಗಳು ಮಾತನಾಡುತ್ತವೆ. ಯಾವುದೀ ವಲಯ ಎಂದು ಗಾಬರಿ ಬೀಳುವಿರೇನು..? ಅದುವೇ ಭಾರತೀಯ ಷೇರುಪೇಟೆ ವಹಿವಾಟು.

ಈ ಷೇರು ಮಾರುಕಟ್ಟೆ ವಹಿವಾಟಿನಿಂದ ರಾತೋ ರಾತ್ರಿ ದಿಢೀರ್ ಶ್ರೀಮಂತರಾದ ಅದೆಷ್ಟೋ ಜನ ನಮ್ಮ ಕಣ್ಣ ಮುಂದಿದ್ದಾರೆ. ಷೇರುಪೇಟೆ ಭರ್ಜರಿ ಏರಿಕೆ ಕಂಡ ಹಿನ್ನೆಲೆಯಲ್ಲಿ, ದೇಶದ ನಂಬರ್ ಒನ್ ರಿಯಲ್ ಎಸ್ಟೇಟ್ ಉದ್ಯಮಪತಿ ಕುಶಾಲ್ ಪಾಲ್ ಸಿಂಗ್ ಅವರು ಒಂದೇ ದಿನ 7 ಸಾವಿರ ಕೋಟಿ ರೂಪಾಯಿ ಲಾಭ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದೊಂದು ದಶಕದ ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲಿ, 2007 ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವರ್ಷ ಎಂದು ಹೆಮ್ಮೆಯಿಂದ ಹೇಳಬಹುದು. ಏಕೆಂದರೆ, ಬಾಂಬೆ ಷೇರು ಮಾರುಕಟ್ಟೆ 10 ಸಾವಿರ ಸಂವೇದಿ ಸೂಚ್ಯಂಕವನ್ನು ತಲುಪಲು 10 ವರ್ಷಗಳ ಸಮಯವನ್ನು ತೆಗೆದುಕೊಂಡರೆ, ಅದಕ್ಕೆ ಮತ್ತೆ 10 ಸಾವಿರ ಅಂಕಗಳ ಸೇರ್ಪಡೆಗೊಳಿಸಿ, 20 ಸಾವಿರ ಗಡಿ ದಾಟಲು ತೆಗೆದುಕೊಂಡ ಸಮಯ ಕೇವಲ ಒಂದೇ ವರ್ಷ, ಅದುವೇ 2007.

ಬಾಂಬೆ ಷೇರು ಮಾರುಕಟ್ಟೆಯ ಪಾಲಿಗೆ 2007 ಪರ್ವಕಾಲ. ಅದರಲ್ಲೂ ಡಿಸೆಂಬರ್ ಮಾಸದಲ್ಲಿಯೇ ವರ್ಷದ ಅತಿ ಗರಿಷ್ಠ ಮತ್ತು ಕನಿಷ್ಠ ಸೂಚ್ಯಂಕ ದಾಖಲಾಗಿರುವುದು ವಿಶೇಷ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿ ಗುರುತಿಸಲ್ಪಟ್ಟ ನಂತರ ಭಾರತದ ಅಗ್ರಗಣ್ಯ ಅಭಿವೃದ್ಧಿ ಹೊಂದಿದ ಕಂಪೆನಿಗಳಿಗೆ ಮತ್ತು ಉದಯೋನ್ಮುಖ ಕಂಪೆನಿಗಳಿಗೂ ಸಹ ಭಾರಿ ಲಾಭ ದೊರಕಿಸಿಕೊಡುವಲ್ಲಿ ಷೇರು ಸಂವೇದಿ ಸೂಚ್ಯಂಕ ಸಕಾರಾತ್ಮಕವಾಗಿ ವರ್ತಿಸಿತು.

ವರ್ಷದ ಗರಿಷ್ಠ ದಾಖಲೆ:

ಡಿಸೆಂಬರ್ 14 ಬಾಂಬೆ ಷೇರು ಮಾರುಕಟ್ಟೆ ಕಂಡ ಅತಿ ಸಂತಸದ ದಿನ. ಕಾರಣ, ಅಂದು ಬಾಂಬೆ ಷೇರು ಮಾರುಕಟ್ಟೆ ತನ್ನ ಇತಿಹಾಸದಲ್ಲಿಯೇ ನೂತನ ಅಧ್ಯಾಯವೊಂದನ್ನು ಬರೆದಿದ್ದು, ಅಂದು 20,498.11 ಅಂಕಗಳ ದಾಖಲಿಸುವುದರೊಂದಿಗೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಸುದ್ದಿ ಮಾಡಿತು.

ಅಷ್ಟೇ ಅಲ್ಲ, ಈ ಷೇರು ಮಾರುಕಟ್ಟೆಯ ಪ್ರಭಾವದಿಂದಾಗಿ ನಮ್ಮ ನಾಡು ಕಂಡ ಶ್ರೇಷ್ಠ ಕೈಗಾರಿಕೋದ್ಯಮಿಗಳಾದ ಅನಿಲ್ ಅಂಬಾನಿ, ಮುಖೇಶ್ ಅಂಬಾನಿ, ಕುಶಾಲ್ ಪಾಲ್ ಸಿಂಗ್, ಸುನಿಲ್ ಭಾರ್ತಿ ಮಿತ್ತಲ್, ಅಜೀಂ ಪ್ರೇಮ್‌ಜಿ, ನಾರಾಯಣ ಮೂರ್ತಿ ಸೇರಿದಂತೆ ಅನೇಕ ಉದ್ಯಮಿಗಳು ತಮ್ಮ ಸಂಪತ್ತನ್ನು ಕೇವಲ ಒಂದು ವರ್ಷದಲ್ಲಿ ಭಾರಿ ವೃದ್ಧಿಗೊಳಿಸಿಕೊಂಡಿದ್ದಾರೆ.

ಸೆನ್ಸೆಕ್ಸ್ ಮಾಡಿದ ಕರಾಮತ್ತಿನಿಂದಾಗಿ ಒಂದು ಬಾರಿ ನಮ್ಮ ಮುಖೇಶ್ ಅಂಬಾನಿ ಅವರು ವಿಶ್ವದ ನಂಬರ್ ಒನ್ ಕುಬೇರ ಪಟ್ಟವನ್ನು ಸಹ ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷದ ಅವಧಿಯಲ್ಲಿ ಭಾರತದ ಮುಖೇಶ್ ಮತ್ತು ಅನಿಲ್ ಅಂಬಾನಿ, ಕೆ.ಪಿ.ಸಿಂಗ್, ಸುನಿಲ್ ಭಾರ್ತಿ ಮಿತ್ತಲ್ ಅವರುಗಳು ಶತಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದು ಇನ್ನೊಂದು ವಿಶೇಷ.

ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ವಿದೇಶಿ ನೇರ ಬಂಡವಾಳದಿಂದಾಗಿ ಭಾರತೀಯ ಮೂಲದ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀ, ಸರಕಾರಿ ಸ್ವಾಮ್ಯದ ಒಎನ್‌ಜಿಸಿ, ಭಾರ್ತಿ ಏರ್‌ಟೆಲ್, ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಾದ ಐಸಿಐಸಿಐ, ರಿಯಲ್ ಎಸ್ಟೇಟ್ ವಲಯದ ದೈತ್ಯ ಡಿಎಲ್‌ಎಫ್ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟು ಭಾರಿ ಪ್ರಮಾಣದಲ್ಲಿ ಸಂಪತ್ತನ್ನು ವೃದ್ಧಿಸಿಕೊಂಡಿವೆ ಎಂದರೆ ಅತಿಶಯೋಕ್ತಿ ಎನಲ್ಲ.

ವರ್ಷದ ಕನಿಷ್ಠ ದಾಖಲೆ:

ಮೇಲೇರಿದ ಗಾಳಿಪಟ ಕೆಳಗಿಳಿಯಲೇಬೇಕು ಎನ್ನುವುದು ಸೃಷ್ಟಿಯ ನಿಯಮ. ಈ ನಿಯಮ ಎಲ್ಲಾ ರಂಗಗಳಿಗೂ, ಎಲ್ಲಾ ವಲಯಗಳಿಗೂ ಅನ್ವಯಿಸುತ್ತಿದ್ದು, ಷೇರುಮಾರುಕಟ್ಟೆ ಇದಕ್ಕೇನೂ ಹೊರತಾದಂತಿಲ್ಲ.

ಈ ಷೇರು ಮಾರುಕಟ್ಟೆಯೇ ಹಾಗೆ, ಯಾವ ಸಂದರ್ಭದಲ್ಲಿ ಏರುತ್ತದೆ ಮತ್ತು ಯಾವ ಸಂದರ್ಭದಲ್ಲಿ ಇಳಿಯುತ್ತದೆ ಎನ್ನುವ ಅಂಶವನ್ನು ತನ್ನಲ್ಲಿಯೇ ಬಚ್ಚಿಟ್ಟುಕೊಂಡು, ರಹಸ್ಯವಾಟವಾಡುತ್ತದೆ. ಹಲವಾರು ಲಕ್ಷಾಧಿಪತಿಗಳನ್ನು ಭಿಕ್ಷಾಧಿಪತಿಗಳನ್ನಾಗಿಯೂ ಮತ್ತು ಸಾಮಾನ್ಯರನ್ನು ರಾತೋರಾತ್ರಿ ಕುಬೇರರನ್ನಾಗಿಯೂ ಮಾಡಿದ ಕೀರ್ತಿ, ಅಪಕೀರ್ತಿ ಎರಡನ್ನೂ ಹೊಂದಿದೆ.

ಡಿಸೆಂಬರ್ 17ರ ಸೋಮವಾರ ಷೇರು ಮಾರುಕಟ್ಟೆಯ ಇತಿಹಾಸ ಕಂಡ ಎರಡನೇ ಅತಿದೊಡ್ಡ ಕುಸಿತ ದಾಖಲಾಯಿತು. ಅಮೆರಿಕನ್ ಹಣದುಬ್ಬರ ದರದಲ್ಲಾದ ಏರುಪೇರು ಮತ್ತು ಏಷ್ಯನ್ ಷೇರು ಮಾರುಕಟ್ಟೆಯಲ್ಲಾದ ಕುಸಿತದಿಂದಾಗಿ ಒಂದೇ ದಿನ 769 ಅಂಕಗಳ ಕುಸಿತ ಕಂಡ ಹಿನ್ನಲೆಯಲ್ಲಿ, ಹೂಡಿಕೆದಾರರಿಗೆ ಒಟ್ಟು 3 ಲಕ್ಷ ಕೋಟಿ ರೂಪಾಯಿ ಹಾನಿಯಾಗಿದೆ.

ವಾರಾಂತ್ಯದ ಶುಕ್ರವಾರದ ದಿನದಂತ್ಯಕ್ಕೆ 68,66,534 ಕೋಟಿ ರೂಪಾಯಿ ಇದ್ದ ಷೇರು ಮಾರುಕಟ್ಟೆ ಸಂಪತ್ತು, ಸೋಮವಾರದ ದಿನದಂತ್ಯಕ್ಕೆ 65,65,338 ಕೋಟಿ ರೂಪಾಯಿಗೆ ಬಂದು ತಲುಪಿತು. 2006ರ ಮೇ 18ರಂದು ದಾಖಲಾದ 826 ಅಂಕಗಳ ಕುಸಿತವೇ ಇದುವರೆಗೆ ಮುಂಬೈ ಷೇರು ಮಾರುಕಟ್ಟೆ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ಕುಸಿತ.

ವಿದೇಶಿ ನೇರ ಬಂಡವಾಳದಿಂದಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಬಂದಿರುವ ಷೇರುಮಾರುಕಟ್ಟೆ ಇಂತಹ ದಿಢೀರ್ ಕುಸಿತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮನ ಮತ್ತು ಗಮನ ಬೇರೆಡೆಗೆ ಹರಿಯುವಂತೆ ಮಾಡುತ್ತದೆ ಎಂದು ಹೇಳಬಹುದು.

ಇದುವರೆಗೆ ಷೇರುಮಾರುಕಟ್ಟೆ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ದಾಖಲೆಯ ಹತ್ತು ಕುಸಿತಗಳ ಪಟ್ಟಿ ಇಂತಿದೆ.

ಮೇ 18, 2006 826 ಅಂಕಗಳು

ಡಿಸೆಂಬರ್ 17, 2007 --- 769.48 ಅಂಕಗಳು

# ಅಕ್ಟೋಬರ್ 17, 2007 --- 717.43 ಅಂಕಗಳು

# ನವೆಂಬರ್ 20, 2007 --- 678.18 ಅಂಕಗಳು

# ಆಗಸ್ಟ್ 16, 2007 --- 642.70 ಅಂಕಗಳು

# ಏಪ್ರಿಲ್ 2, 2007 --- 616.73 ಅಂಕಗಳು

# ಆಗಸ್ಟ್ 1, 2007 --- 615.22 ಅಂಕಗಳು

# ಏಪ್ರಿಲ್ 28, 1992 --- 570 ಅಂಕಗಳು

# ಮೇ 17, 2004 --- 564.71 ಅಂಕಗಳು

# ಜುಲೈ 27, 2007 --- 541.74 ಅಂಕಗಳು

2007ರಲ್ಲಿ ಏನಿದ್ದರೂ ಗೂಳಿಯದೇ ಭರ್ಜರಿ ಓಟ, ಗೂಳಿಯ ನಾಗಾಲೋಟದ ಮುಂದೆ ಕರಡಿ ಕರ್ರನೆ ಕರಗಿ ಹೋಗಿದ್ದು, (ಷೇರು ಮಾರುಕಟ್ಟೆಯ ಭಾಷೆಯಲ್ಲಿ ಗೂಳಿ ಮತ್ತು ಕರಡಿ ಪದಗಳಿಗೆ ಭಾರಿ ಪ್ರಾಮುಖ್ಯತೆ. ಗೂಳಿ ಎಂದರೆ ಏರಿಕೆ. ಕರಡಿ ಎಂದರೆ ಇಳಿಕೆ) ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲಿ ದಾಖಲಾದ ಯಶಸ್ವಿ ವರ್ಷವೊಂದು ಕಾಲದ ಗರ್ಭದಲ್ಲಿ ಲೀನವಾಗುತ್ತಾ ಸಾಗಿದರೂ, ತನ್ನದೆ ಆದ ಅಸ್ವಿತ್ವವನ್ನು ಉಳಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ