ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಕಳೆದ ಬಾರಿ ಭಾರತ-ಪಾಕಿಸ್ತಾನ ಏಷ್ಯಾ ಕಪ್ ನಲ್ಲಿ ಮುಖಾಮುಖಿಯಾಗಿದ್ದಾಗ ಭಾರತ ಒಂದು ಪಂದ್ಯ ಗೆದ್ದು, ಇನ್ನೊಂದರಲ್ಲಿ ಸೋಲು ಕಂಡಿತ್ತು. ಈ ಬಾರಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ರೋಹಿತ್ ಪಡೆಯಿದೆ.
ತಂಡಕ್ಕೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಕಮ್ ಬ್ಯಾಕ್ ಮಾಡಿರುವುದು ರೋಹಿತ್ ಗೆ ಬಲ ಬಂದಂತಾಗಿದೆ. ಬ್ಯಾಟಿಂಗ್ ನಲ್ಲಿ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರೆ ರೋಹಿತ್ ಕೆಳ ಕ್ರಮಾಂಕದಲ್ಲಿ ಆಡಬಹುದು. ಉಳಿದಂತೆ ಕೊಹ್ಲಿ, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಸ್ಪಿನ್ನರ್ ಗಳಾಗಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯಬಹುದು.
ಇತ್ತ ಪಾಕಿಸ್ತಾನವೂ ಸುಲಭ ತುತ್ತೇನಲ್ಲ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಜಯ ಗಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್ ಬ್ಯಾಟಿಗ, ನಾಯಕ ಬಾಬರ್ ಅಜಮ್ ಫಾರ್ಮ್ ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಇಫ್ತಿಕಾರ್ ಅಹಮ್ಮದ್ ಕೆಳ ಕ್ರಮಾಂಕದಲ್ಲಿ ಸಿಡಿದು ನಿಂತಿದ್ದರು. ಇನ್ನು, ಆರಂಭಿಕ ಫಕಾರ್ ಜಮನ್, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಭಾರತದ ವಿರುದ್ಧ ಈ ಹಿಂದೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಬೌಲಿಂಗ್ ವಿಚಾರಕ್ಕೆ ಬಂದರೆ ಶಾಹಿನ್ ಅಫ್ರಿದಿ ಮಾರಕವಾಗಬಹುದು. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಇಂದು ಫಿಟ್ ಆಗಿ ಮರಳುವ ನಿರೀಕ್ಷೆಯಿದೆ. ಒಂದು ವೇಳೆ ಅವರು ಕೈಕೊಟ್ಟರೆ ಹ್ಯಾರಿಸ್ ರೌಫ್, ನಸೀಂ ಶಾ ಆ ಕೊರತೆ ನೀಗಬಹುದು. ಒಟ್ಟಿನಲ್ಲಿ ಎರಡೂ ತಂಡಗಳೂ ಮೇಲ್ನೋಟಕ್ಕೆ ಸಮಬಲವಾಗಿದ್ದು, ಭಾರೀ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಅಪರಾಹ್ನ 3 ಗಂಟೆಗೆ ಆರಂಭವಾಗಲಿದೆ.