ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಾಯಕತ್ವದ ಕುರಿತಂತೆ ಕ್ರಿಕೆಟ್ ಮಂಡಳಿ ಅಕ್ಷರಶಃ ಸಂಗೀತ ಕುರ್ಚಿ ಆಡುತ್ತಿದೆ. ಇದೀಗ ಮತ್ತೆ ಬಾಬರ್ ಅಜಮ್ ರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಏಕದಿನ ವಿಶ್ವಕಪ್ ಸೋಲಿನ ಬಳಿಕ ಬಾಬರ್ ಅಜಮ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ಬದಲು ತಂಡದ ನಾಯಕತ್ವವಹಿಸಿದ್ದ ಶಾಹಿನ್ ಅಫ್ರಿದಿ ಅದಕ್ಕಿಂತ ಕಳಪೆ ಪ್ರದರ್ಶನ ನೀಡಿದ್ದರು. ಈ ಹಿನ್ನಲೆಯಲ್ಲಿ ಟಿ20 ವಿಶ್ವಕಪ್ ಗೆ ಮತ್ತೆ ಬಾಬರ್ ಅಜಮ್ ಗೆ ತಂಡದ ನಾಯಕತ್ವ ನೀಡಲಾಯಿತು.
ಆದರೆ ಪಾಕ್ ತಂಡದ ಪ್ರದರ್ಶನ ಸುಧಾರಿಸಲಿಲ್ಲ. ಯುಎಸ್ಎ ನಂತಹ ದುರ್ಬಲ ತಂಡದ ಎದುರು ಸೋತು ಮುಖಭಂಗ ಅನುಭವಿಸಿತು. ಇದರ ಬೆನ್ನಲ್ಲೇ ಬಾಬರ್ ಅಜಮ್ ನಾಯಕತ್ವದ ಬಗ್ಗೆ ಅಸಮಾಧಾನ ಕೇಳಿಬಂದಿತ್ತು. ಇದೀಗ ದೇಶೀಯ ಟೂರ್ನಿಯಲ್ಲೂ ಬಾಬರ್ ಗೆ ನಾಯಕತ್ವ ನೀಡಲಾಗಿಲ್ಲ.
ಇದನ್ನು ಗಮನಿಸಿದರೆ ಮುಂದೆ ಸೀಮಿತ ಓವರ್ ಗಳ ಪಂದ್ಯದ ನಾಯಕತ್ವದಿಂದ ಮತ್ತೊಮ್ಮೆ ಬಾಬರ್ ಅಜಮ್ ಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬಾಬರ್ ಅಜಮ್ ತಂಡದ ಸ್ಟಾರ್ ಆಟಗಾರ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ಹೀಗಾಗಿ ಅವರ ವಿರುದ್ಧ ಭಾರೀ ಆಕ್ರೋಶವಿದೆ.