ಹರ್ಲೀನ್‌ ಅಬ್ಬರಕ್ಕೆ ಬೆಚ್ಚಿದ ಕ್ಯಾಪಿಟಲ್ಸ್‌: ಆರ್‌ಸಿಬಿ ತಂಡದ ನಾಕೌಟ್‌ ಕನಸು ಮತ್ತಷ್ಟು ಕಠಿಣ

Sampriya

ಶುಕ್ರವಾರ, 7 ಮಾರ್ಚ್ 2025 (23:54 IST)
Photo Courtesy X
ಲಖನೌ (ಪಿಟಿಐ): ಗುಜರಾತ್‌ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ನೌಕೌಟ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಹರ್ಲೀನ್‌ ಡಿಯೊಲ್‌ (70;49ಎಸೆತ, 4x9, 6x1) ಅವರ ಬ್ಯಾಟಿಂಗ್‌ ನೆರವಿನಿಂದ ಜೈಂಟ್ಸ್‌ ತಂಡ ಡೆಲ್ಲಿ ತಂಡವನ್ನು ಮಣಿಸಿತು. ಇದರಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಕೌಟ್‌ ಕನಸು ಮತ್ತಷ್ಟು ಜಟಿಲವಾಯಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ತಂಡ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತು.

178 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ ತಂಡ ಹೇಮಲತಾ ದಯಾಳನ್ (1ರನ್‌) ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬೆತ್‌ ಮೂನಿ ಜೊತೆಗೂಡಿದ ಹರ್ಲಿನ್‌ ಡಿಯೊಲ್‌ ಎರಡನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.

ಶನಿವಾರದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯು.ಪಿ ವಾರಿಯರ್ಸ್‌ ತಂಡವನ್ನು ಎದುರಿಸಲಿದೆ. ವಾರಿಯರ್ಸ್‌ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ನಾಕೌಟ್‌ ಕನಸು ಜೀವಂತವಾಗಿ ಉಳಿಯಲು ಆರ್‌ಸಿಬಿ ನಾಳಿನ ಪಂದ್ಯ ಗೆಲ್ಲಲೇಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ