ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ವಡೋದರ ಲೆಗ್ ಮತ್ತು ಬೆಂಗಳೂರು ಲೆಗ್‌ನಲ್ಲಿ ಒಟ್ಟು 14 ಪಂದ್ಯಗಳು ನಡೆದಿವೆ. ಈ ಪೈಕಿ 13 ಪಂದ್ಯಗಳಲ್ಲಿ ಚೇಸಿಂಗ್ ತಂಡಗಳೇ ಜಯಭೇರಿ ಬಾರಿಸಿವೆ. ಹಾಗಾದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಸೋಲು ಗ್ಯಾರಂಟಿನಾ....
ಹೀಗೊಂದು ಚರ್ಚೆ ಕ್ರೀಡಾವಲಯದಲ್ಲಿ ಜೋರಾಗಿದೆ. ಪಂದ್ಯದ ಗೆಲುವಿಗೆ ಟಾಸ್ ಗೆಲುವೇ ನಿರ್ಣಾಯಕವಾಗುತ್ತಿದೆ. ವಡೋದರ ಲೆಗ್‌ನಲ್ಲಿ ನಡೆದ ಆರೂ ಪಂದ್ಯಗಳಲ್ಲಿ ಚೇಸಿಂಗ್ ತಂಡಗಳೇ ಗೆಲುವು ಸಾಧಿಸಿವೆ. ಬೆಂಗಳೂರು ಲೆಗ್‌ನಲ್ಲಿ ನಡೆದ 8 ಪಂದ್ಯಗಳ ಪೈಕಿ ಏಳು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಸೋಲು ಕಂಡಿವೆ.
ಎಂಟನೇ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮಖಿಯಾಗಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಾರಿಯರ್ಸ್ 177 ರನ್ ಗಳಿಸಿದ್ದರೆ, ನಂತರ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 144 ರನ್‌ಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಡೋದರ ಲೆಗ್‌ನಲ್ಲಿ ಎರಡು ಪಂದ್ಯಗಳಲ್ಲಿ ಚೇಸಿಂಗ್ ಮಾಡಿ ಗೆದ್ದಿದೆ. ತವರಿನಲ್ಲಿ ನಡೆದ ನಾಲ್ಕೂ ಪಂದ್ಯಗಳಲ್ಲಿ ಸ್ಮೃತಿ ಮಂದಾನ ಟಾಸ್ ಸೋತು, ಬ್ಯಾಟಿಂಗ್ ಇಳಿಯಬೇಕಾಯಿತು. ತವರಿನ ಪ್ರೇಕ್ಷಕರ ಬೆಂಬಲವಿದ್ದರೂ ಸತತ ನಾಲ್ಕೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದರು. ಹಾಗಾದರೆ ಎರಡೂ ಪಿಚ್‌ಗಳು ನಂತರ ಬ್ಯಾಟಿಂಗ್ ಮಾಡಿದ ತಂಡಗಳಿಗೆ ಅನುಕೂಲವಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ.