ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ವಿರುದ್ಧ ವಿಚಿತ್ರವಾಗಿ ರೀಲ್ಸ್ ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ. ವಿಶ್ವ ಚಾಂಪಿಯನ್ಸ್ ಗೆದ್ದ ಬಳಿಕ ಯುವಿ, ಭಜಿ, ರೈನಾ ವಿಚಿತ್ರ ರೀಲ್ಸ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಾಕಿಸ್ತಾನ ತಂಡವನ್ನು ಲೆಜೆಂಡ್ಸ್ ವಿಶ್ವ ಚಾಂಪಿಯನ್ಸ್ ಟೂರ್ನಿ ಫೈನಲ್ ನಲ್ಲಿ ಸೋಲಿಸಿದ ಬಳಿಕ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ತೌಬಾ ತೌಬಾ ರೀಲ್ಸ್ ಗೆ ಡಬ್ ಮಾಡಿ ಪ್ರಕಟಿಸಿದ್ದರು.
ಈ ರೀಲ್ಸ್ ನಲ್ಲಿ ಮೂವರೂ ವಿಕಲಾಂಗರಂತೆ ನಡೆದುಕೊಂಡು ಬರುವ ದೃಶ್ಯವಿದೆ. ಈ ಮೂವರು ಇಂತಹದ್ದೊಂದು ರೀಲ್ಸ್ ಪ್ರಕಟಿಸುತ್ತಿದ್ದಂತೇ ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವಿಕಲಾಂಗ ಚೇತನರ ಹಕ್ಕುಗಳ ಸಂರಕ್ಷಿಸುವ ಎನ್ ಸಿಪಿಇಡಿಪಿ ಎಂಬ ಸಂಸ್ಥೆ ದೂರು ದಾಖಲಿಸಿದೆ.
ದೆಹಲಿಯ ಅಮರ್ ಕಾಲೊನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದು ದೇಶದಲ್ಲಿರುವ 10 ಕೋಟಿ ಗೂ ಅಧಿಕ ವಿಕಲಾಂಗ ಚೇತನರಿಗೆ ಮಾಡಿದ ಅವಮಾನ ಎಂದು ದೂರುದಾರರು ಹೇಳಿದ್ದಾರೆ. ತಮ್ಮ ರೀಲ್ಸ್ ವಿವಾದಕ್ಕೀಡಾಗುತ್ತಿದ್ದಂತೇ ಕ್ರಿಕೆಟಿಗರು ಕ್ಷಮೆ ಯಾಚಿಸಿದ್ದಾರೆ.