ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಇಂದಿನಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಭಾರತನ ತಂಡವನ್ನು ಸೂರ್ಯಕುಮಾರ್ ಯಾದವ್ ಮತ್ತು ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸುತ್ತಿದ್ದಾರೆ.
ಈಡನ್ ಗಾರ್ಡನ್‌ನಲ್ಲಿ 14 ವರ್ಷಗಳ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 2011ರಲ್ಲಿ ಈ ಮೈದಾನದಲ್ಲಿ ಇವರಿಬ್ಬರ ನಡುವೆ ಕೊನೆಯ ಬಾರಿ ಟಿ20 ಪಂದ್ಯ ನಡೆದಿತ್ತು.
ಭಾರತದ ಪರ ಏಕೈಕ ವೇಗದ ಬೌಲರ್ ಕಣಕ್ಕಿಳಿಯುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಟೀಮ್ ಇಂಡಿಯಾಗೆ ವಾಪಸ್ ಆಗಿರುವ ಮೊಹಮ್ಮದ್ ಶಮಿ ಆಡುವ ನಿರೀಕ್ಷೆಯಿತ್ತು. ಆದರೆ, ಅವರಿಗೆ ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಭಾರತದ ಏಕೈಕ ವೇಗದ ಬೌಲರ್ ಆಗಿ ಅರ್ಷದೀಪ್ ಸಿಂಗ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ, ನಿತೀಶ್‌ಕುಮಾರ್ ರೆಡ್ಡಿ ಮತ್ತು ಉಪನಾಯಕ ಅಕ್ಸರ್ ಪಟೇಲ್ ಮೂವರು ಆಲ್‌ರೌಂಡರ್ ವಿಭಾಗದಲ್ಲಿದ್ದಾರೆ. ಇನ್ನೂ ಸ್ಪಿನ್ನರ್‌ಗಳಾಗಿ ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಅವರಿದ್ದಾರೆ. ಉಳಿದಂತೆ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಭಾರತ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಫಿನಿಶರ್ ಪಾತ್ರಕ್ಕೆ ರಿಂಕು ಸಿಂಗ್ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಲಾಗಿದೆ.