ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ 700 ವಿಕೆಟ್ ಗಳ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 700 ಪ್ಲಸ್ ವಿಕೆಟ್ ಪಡೆದ ಮೂರನೇ ಬೌಲರ್ ಮತ್ತು ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಮೊದಲು ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ಈ ದಾಖಲೆ ಮಾಡಿದ್ದಾರೆ. ಮುತ್ತಯ್ಯ ಮುರಳೀಧರನ್ 800 ಮತ್ತು ಶೇನ್ ವಾರ್ನ್ 708 ವಿಕೆಟ್ ಕಬಳಿಸಿದ್ದಾರೆ. ಆದರೆ ಈ ಇಬ್ಬರೂ ಸ್ಪಿನ್ನರ್ ಗಳು. ವೇಗಿಗಳು 700 ಪ್ಲಸ್ ವಿಕೆಟ್ ಗಳಿಸುತ್ತಿರುವುದು ಇದೇ ಮೊದಲು.
ಇಂದು ಕುಲದೀಪ್ ಯಾದವ್ ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಈ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರ ಈ ಸಾಧನೆಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಕೊಂಡಾಡಿದ್ದಾರೆ. ಜಢಮೆಸ್ ಆಂಡರ್ಸನ್ ಈ ಸರಣಿಯಲ್ಲಿ ಅಷ್ಟೊಂದು ವಿಕೆಟ್ ಪಡೆಯಲು ಸಫಲರಾಗಿರಲಿಲ್ಲ. ಆದರೆ ಈ ಇನಿಂಗ್ಸ್ ನಲ್ಲಿ ಒಟ್ಟು ಎರಡು ವಿಕೆಟ್ ಕಬಳಿಸಿದರು.
41 ವರ್ಷದ ಜೇಮ್ಸ್ ಆಂಡರ್ಸನ್ ಇದುವರೆಗೆ 187 ಟೆಸ್ಟ್ ಪಂದ್ಯವಾಡಿದ್ದಾರೆ. ವೇಗದ ಬೌಲರ್ ಆಗಿ ಇಷ್ಟು ಸಮಯ ಫಿಟ್ನೆಸ್ ಕಾಯ್ದುಕೊಂಡು ಟೆಸ್ಟ್ ಪಂದ್ಯವಾಡುವುದು ಎಂದರೆ ಸುಲಭದ ಮಾತಲ್ಲ. ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ಇದುವರೆಗೆ 32 ಬಾರಿ ಐದು ವಿಕೆಟ್ ಗಳಿಸಿದ್ದಾರೆ.3 ಬಾರಿ 10 ವಿಕೆಟ್ ಗಳ ಸಾಧನೆ ಮಾಡಿದ್ದಾರೆ.