ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅವರ ತಂದೆ ಲಖ್ವಿಂದರ್ ಸಿಂಗ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕ್ಲಿಕ್ ಆದ ಬಳಿಕ ಮತ್ತು ಚೇತೇಶ್ವರ ಪೂಜಾರ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಹೋದ ನಂತರ ಶುಬ್ಮನ್ ಗಿಲ್ ರನ್ನು ಟೆಸ್ಟ್ ಮಾದರಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗುತ್ತಿದೆ. ಆರಂಭದಲ್ಲಿ ಅವರು ಈ ಸ್ಥಾನದಲ್ಲಿ ಹೆಚ್ಚು ಯಶಸ್ವಿಯಾಗಿರಲಿಲ್ಲ. ಆದರೆ ಈಗೀಗ ಕ್ಲಿಕ್ ಆಗುತ್ತಿದ್ದಾರೆ. ಈ ಸರಣಿಯಲ್ಲೇ ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ಎರಡು ಶತಕ ಗಳಿಸಿದ್ದಾರೆ.
ಹಾಗಿದ್ದರೂ ಅವರ ತಂದೆ ಲಖ್ವಿಂದರ್ ಸಿಂಗ್ ಮಾತ್ರ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಇದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನ ತಪ್ಪು ನಿರ್ಧಾರ ಎಂದು ಅವರು ಹೇಳಿದ್ದಾರೆ. ಗಿಲ್ ಆರಂಭಿಕ ಸ್ಥಾನಕ್ಕೇ ಸೂಕ್ತ. ಮೂರನೇ ಕ್ರಮಾಂಕಕ್ಕೆ ಅವರ ಬ್ಯಾಟಿಂಗ್ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗಿಲ್ ಅವರ ಬಾಲ್ಯದ ಕೋಚ್ ಕೂಡಾ ಆಗಿರುವ ಲಖ್ವಿಂದರ್ ಸಿಂಗ್, ಚೇತೇಶ‍್ವರ ಪೂಜಾರ ರಕ್ಷಣಾತ್ಮಕವಾಗಿ ಆಡುತ್ತಿದ್ದರು. ಅವರ ಸ್ಥಾನಕ್ಕೆ ಗಿಲ್ ಆಯ್ಕೆ ಸೂಕ್ತವಲ್ಲ. ಇದು ತಪ್ಪು ನಿರ್ಧಾರ. ಗಿಲ್ ಆಕ್ರಮಣಕಾರೀ ಆಟ ಆಡುವವರು. ಅಂತಿಮವಾಗಿ ನೀವು ಗಳಿಸುವ ರನ್ ನಿಂದ ತಂಡಕ್ಕೆ ಎಷ್ಟು ಉಪಯೋಗವಾಯಿತು ಎನ್ನುವುದು ಮುಖ್ಯ. ಗಿಲ್ ಈ ಮೊದಲು ಏಕದಿನದಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಗಳಿಸಿದ್ದ. ಆದರೂ ಆವತ್ತು ಎದುರಾಳಿಗಳು ಗೆಲುವಿನ ಗುರಿಯ ಸನಿಹ ಬಂದಿದ್ದರು. ನಾನು ಈ ನಿರ್ಧಾರದ ಬಗ್ಗೆ ಹೆಚ್ಚೇನೂ ಹೇಳಲ್ಲ. ಆದರೆ ಮೂರನೇ ಕ್ರಮಾಂಕಕ್ಕೆ ಪೂಜಾರ ರೀತಿಯ ಆಟ ಸೂಕ್ತವಾಗಿತ್ತು ಎಂದಿದ್ದಾರೆ.