ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡಿದ ಮೊದಲ ಪಂದ್ಯದಲ್ಲೇ ಕನ್ನಡಿಗ ದೇವದತ್ ಪಡಿಕ್ಕಲ್ ಅರ್ಧಶತಕ ಗಳಿಸಿ ಮಿಂಚಿದ್ದಾರೆ.
ಭಾರತದ ಮೊದಲ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿದೆ. ನಿನ್ನೆ 135 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತ ಇಂದು ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಭರ್ಜರಿ ಶತಕದಿಂದಾಗಿ 400 ರ ಗಡಿ ದಾಟಿದೆ. ರೋಹಿತ್ 103, ಗಿಲ್ 110 ರನ್ ಗಳಿಸಿ ಔಟಾದರು.
ಈ ಇಬ್ಬರೂ ಬ್ಯಾಟಿಗರು ಬೆನ್ನು ಬೆನ್ನಿಗೇ ಔಟಾದಾಗ ಭಾರತಕ್ಕೆ ಆಸರೆಯಾಗಿದ್ದು ಸರ್ಫರಾಜ್ ಖಾನ್ ಮತ್ತು ಚೊಚ್ಚಲ ಪಂದ್ಯವಾಡುತ್ತಿರುವ ದೇವದತ್ ಪಡಿಕ್ಕಲ್. ಒಟ್ಟು 103 ಎಸೆತ ಎದುರಿಸಿದ ದೇವದತ್ 65 ರನ್ ಗಳಿಸಿ ಶೊಯೇಬ್ ಬಾಶಿರ್ ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದರು.
ಇನ್ನೊಂದಡೆ ಸರ್ಫರಾಜ್ ಖಾನ್ 60 ಎಸೆತಗಳಿಂದ 56 ರನ್ ಗಳಿಸಿ ಔಟಾದರು. ಕಳೆದ ಪಂದ್ಯದ ಹೀರೋ ಧ್ರುವ್ ಜುರೆಲ್ ಆಟ ಇಂದು ಅಷ್ಟಾಗಿ ನಡೆಯಲಿಲ್ಲ. ಕೇವಲ 15 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದೀಗ 15 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಖಾತೆ ತೆರೆಯದೇ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ 209 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಅತ್ತ ಇಂಗ್ಲೆಂಡ್ ಪರ ಶೊಯೇಬ್ ಬಾಶಿರ್ 4 ವಿಕೆಟ್ ಕಬಳಿಸಿದ್ದಾರೆ.