ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ರವಿಚಂದ್ರನ್ ಅಶ್ವಿನ್ ಶೂನ್ಯ ಸಂಪಾದನೆ ಮಾಡಿದ್ದಾರೆ. ಆದರೆ ಭಾರತದ ಇತರೆ ಬ್ಯಾಟಿಗರು ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಎರಡನೇ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿದೆ.
ಇಂದು ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಶತಕದ ಜೊತೆಯಾಟದಿಂದಾಗಿ ಭಾರತ ಭೋಜನ ವಿರಾಮದವರೆಗೂ ವಿಕೆಟ್ ಕಳೆದುಕೊಳ್ಳದೇ 129 ರನ್ ಗಳಿಸಿತು. ಬಳಿಕ ಇಬ್ಬರೂ ಔಟಾದರೂ ಚೊಚ್ಚಲ ಪಂದ್ಯವಾಡುತ್ತಿರುವ ದೇವದತ್ ಪಡಿಕ್ಕಲ್ ಮತ್ತು ಸರ್ಫರಾಜ್ ಖಾನ್ ತಂಡಕ್ಕೆ ಆಸರೆಯಾದರು. ಇಬ್ಬರೂ ಅರ್ಧಶತಕ ಗಳಿಸಿ ಔಟಾದರು.
ಈ ನಡುವೆ ಈ ಪಂದ್ಯದ ಮೂಲಕ 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ರವಿಚಂದ್ರನ್ ಅಶ್ವಿನ್ 5 ಎಸೆತ ಎದುರಿಸಿ ಖಾತೆ ತೆರೆಯುವ ಮೊದಲೇ ಟಾಮ್ ಹಾರ್ಟ್ಲೀಗೆ ವಿಕೆಟ್ ಒಪ್ಪಿಸಬೇಕಾಯಿತು. ಆದರೆ ನಂತರ ಜೊತೆಯಾದ ಕುಲದೀಪ್ ಯಾದವ್-ಜಸ್ಪ್ರೀತ್ ಬುಮ್ರಾ ಜೋಡಿ ಇದುವರೆಗೆ 45 ರನ್ ಗಳ ಜೊತೆಯಾಟವಾಡಿದೆ. ಈ ಸರಣಿಯಲ್ಲಿ ಕುಲದೀಪ್ ಮತ್ತೊಮ್ಮೆ ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ತಾವು ಬ್ಯಾಟಿಂಗ್ ಗೂ ಸೈ ಎನಿಸಿಕೊಂಡರು. ಒಟ್ಟು 55 ಎಸೆತ ಎದುರಿಸಿದ ಕುಲದೀಪ್ 27 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ ಬುಮ್ರಾ 55 ಎಸೆತಗಳಿಂದ 19 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಭಾರತ ಈಗಾಗಲೇ ಮೊದಲ ಇನಿಂಗ್ಸ್ ನಲ್ಲಿ 255 ರನ್ ಗಳ ಬೃಹತ್ ಮುನ್ನಡೆ ಪಡೆದಿದೆ. ಇಂಗ್ಲೆಂಡ್ ಪರ ಶೊಯೇಬ್ ಬಾಶಿರ್ ಮಾತ್ರ 4 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ಉಳಿದಂತೆ ಟಾಮ್ ಹಾರ್ಟ್ಲೀ 2, ಜೇಮ್ಸ್ ಆಂಡರ್ಸನ್ ಮತ್ತು ನಾಯಕ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಕಬಳಿಸಿದರು.