ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿದೆ.
ಇಂಗ್ಲೆಂಡ್ ಪರ ನಿನ್ನೆ ಶತಕ ಸಿಡಿಸಿ ಅಜೇಯರಾಗುಳಿದಿದ್ದ ಬೆನ್ ಡಕೆಟ್ ಇಂದು ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಡಕೆಟ್ 151 ಎಸೆತಗಳಿಂದ 153 ರನ್ ಗಳಿಸಿ ಔಟಾದರು. ಅವರ ಬಿರುಗಾಳಿ ಇನಿಂಗ್ಸ್ ಗೆ ತೆರೆ ಬಿದ್ದ ಮೇಲೆ ಇಂಗ್ಲೆಂಡ್ ಗೆ ಕೊಂಚ ಹಿನ್ನಡೆಯಾಯಿತು.
ಆದರೆ ಇದೀಗ ನಾಯಕ ಬೆನ್ ಸ್ಟೋಕ್ಸ್ ದಿಟ್ಟ ಹೋರಾಟ ನಡೆಸುತ್ತಿದ್ದಾರೆ. ಸ್ಟೋಕ್ಸ್ ಇದೀಗ 39 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ಬೆನ್ ಫೋಕ್ಸ್ 6 ರನ್ ಗಳಿಸಿದ್ದಾರೆ. ಇದಕ್ಕೆ ಮೊದಲು ಜೋ ರೂಟ್ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ದಾಖಲೆಯ 9 ನೇ ಬಾರಿಗೆ ಅವರನ್ನು ಬಲಿತೆಗೆದುಕೊಂಡರು. ಬಳಿಕ ಬಂದ ಜಾನಿ ಬೇರ್ ಸ್ಟೋ ಶೂನ್ಯಕ್ಕೆ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಇದೀಗ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 155 ರನ್ ಗಳ ಹಿನ್ನಡೆಯಲ್ಲಿದೆ. ಎರಡು ಸತತ ವಿಕೆಟ್ ಕಳೆದುಕೊಂಡ ಬಳಿಕ ಇಂಗ್ಲೆಂಡ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದೆ. ಇಂದು ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿ ಭಾರತಕ್ಕೆ ಕಾಡುತ್ತಿದೆ. ಹಾಗಿದ್ದರೂ ಅವರ ಸ್ಥಾನದಲ್ಲಿ ಕುಲದೀಪ್ ಯಾದವ್ 2 ವಿಕೆಟ್ ಕಬಳಿಸುವ ಮೂಲಕ ಹೆಚ್ಚಿನ ಡ್ಯಾಮೇಜ್ ಆಗದಂತೆ ನೋಡಿಕೊಂಡಿದ್ದಾರೆ.
ಇದುವರೆಗೆ ಭಾರತದ ಪರ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದ್ದಾರೆ. ಕುಲದೀಪ್ ಯಾದವ್ 2 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.