ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಟೀಂ ಇಂಡಿಯಾ ನೀಡಿದ 445 ರನ್ ಗಳ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 207 ರನ್ ಚಚ್ಚಿತ್ತು.
ಇಂಗ್ಲೆಂಡ್ ಪರ ಬೆನ್ ಡಕೆಟ್ ಕೇವಲ 113 ಎಸೆತಗಳಿಂದ 133 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ಜೋ ರೂಟ್ 9 ರನ್ ಗಳಿಸಿದ್ದಾರೆ. ಥೇಟ್ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ಕೊನೆಯ ಅವಧಿಯಲ್ಲಿ 200 ರ ಗಡಿ ದಾಟಿದೆ. 5 ಪೆನಾಲ್ಟಿ ರನ್ ಕೂಡಾ ಇರುವುದರಿಂದ ಇಂಗ್ಲೆಂಡ್ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು 238 ರನ್ ಗಳಿಸಿದರೆ ಸಾಕು.
ನಿನ್ನೆಯ ದಿನದಂತ್ಯದ ಓವರ್ ನಲ್ಲಿ ಬೆನ್ ಡಕೆಟ್ ನೀಡಿದ ಕ್ಯಾಚ್ ನ್ನು ರೋಹಿತ್ ಶರ್ಮಾ ಹಿಡಿದರು. ಕ್ಯಾಚ್ ಹಿಡಿಯುವಾಗ ನೆಲಕ್ಕೆ ಬಿದ್ದ ರೋಹಿತ್ ಬಿದ್ದಲ್ಲಿಂದಲೇ ರಿವ್ಯೂ ಕೇಳಿದರು. ಆದರೆ ಚೆಂಡು ಬ್ಯಾಟ್ ಗೆ ತಗುಲಿಲ್ಲ ಎಂಬ ಕಾರಣಕ್ಕೆ ನಾಟೌಟ್ ನೀಡಲಾಯಿತು. ಅದೇನೇ ಇದ್ದರೂ ಎಲ್ಲರ ಗಮನ ಸೆಳೆದಿದ್ದು ರೋಹಿತ್ ಶರ್ಮಾ ರಿವ್ಯೂ ಕೇಳಿದ ರೀತಿ.
ಸಾಮಾನ್ಯವಾಗಿ ತಂಡದ ಸಹ ಆಟಗಾರರ ಬಳಿ ಚರ್ಚಿಸಿ ಸ್ವಲ್ಪ ಸಮಯ ತೆಗೆದುಕೊಂಡು ನಾಯಕ ರಿವ್ಯೂಗೆ ಮನವಿ ಮಾಡುತ್ತಾರೆ. ಆದರೆ ರೋಹಿತ್ ತಾವು ಕ್ಯಾಚ್ ಹಿಡಿದ ಕ್ಷಣ ನೆಲದ ಮೇಲೆ ಬಿದ್ದುಕೊಂಡೇ ರಿವ್ಯೂ ಕೇಳಿದರು. ಅವರ ಈ ಶೈಲಿಯನ್ನು ನೆಟ್ಟಿಗರು ತಮಾಷೆ ಮಾಡಿದ್ದು, ಇದು ಜಸ್ಟ್ ರೋಹಿತ್ ಶರ್ಮಾ ಥಿಂಗ್ಸ್ ಎಂದಿದ್ದಾರೆ. ರೋಹಿತ್ ಮೈದಾನದಲ್ಲಿ ಫನ್ನಿಯಾಗಿರುತ್ತಾರೆ. ರಿವ್ಯೂ ಕೇಳುವಾಗಲೂ ಜಾಲಿಯಾಗಿ ರಿವ್ಯೂ ತೆಗೆದುಕೊಂಡಿದ್ದು ನೋಡಿ ನೆಟ್ಟಿಗರಿಗೆ ತಮಾಷೆ ಎನಿಸಿದೆ.