ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ದಿನದಾಟದಲ್ಲಿ ಇಂದು ರವಿಚಂದ್ರನ್ ಅಶ್ವಿನ್ ಕೌಟುಂಬಿಕ ಕಾರಣಗಳಿಂದಾಗಿ ಗೈರಾಗಲಿದ್ದಾರೆ.
ಇಂದಿನ ದಿನದಾಟದಲ್ಲಿ ಅಶ್ವಿನ್ ಗೈರಾಗಲಿದ್ದಾರೆ. ಆದರೆ ನಾಳೆ ಅವರು ಪಂದ್ಯಕ್ಕೆ ಲಭ್ಯರರಿರಲಿದ್ದಾರೆ. ಕ್ರಿಕೆಟ್ ನಲ್ಲಿ ಈ ರೀತಿ ಆಗುವುದು ಬಲು ಅಪರೂಪ. ಆದರೆ ಅಶ್ವಿನ್ ಅನಿವಾರ್ಯ ಕಾರಣಗಳಿಗೆ ಮನೆಗೆ ತೆರಳಲೇಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ಅವರು ನಿನ್ನೆಯೇ ಚೆನ್ನೈಗೆ ಮರಳಿದ್ದಾರೆ. ಅಂತಹ ಸಂದರ್ಭವೇನು?
ರವಿಚಂದ್ರನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ನೋಡಲು ಅನಿವಾರ್ಯವಾಗಿ ಅಶ್ವಿನ್ ತೆರಳಬೇಕಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಶ್ವಿನ್ ತಾಯಿಗೆ ಅನಾರೋಗ್ಯವಾಗಿದ್ದು, ಅದಕ್ಕಾಗಿ ಅವರು ರಾಜ್ ಕೋಟ್ ನಿಂದ ನೇರವಾಗಿ ಮನೆಗೆ ತೆರಳಲಿದ್ದಾರೆ. ಅವರು ಬೇಗನೇ ಹುಷಾರಾಗಲಿ ಎಂದು ಹಾರೈಸಿದ್ದಾರೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ನಿನ್ನೆಯ ದಿನ ಅಶ್ವಿನ್ ಮೊದಲ ವಿಕೆಟ್ ಕೀಳುವುದರ ಮೂಲಕ ಭಾರತಕ್ಕೆ ಬ್ರೇಕ್ ಥ್ರೂ ನೀಡಿದ್ದರು. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಕಿತ್ತು ದಾಖಲೆ ಮಾಡಿದ್ದರು. ವಿಪರ್ಯಾಸವೆಂದರೆ ಇಂತಹ ಖುಷಿಯ ಸಂದರ್ಭದಲ್ಲಿಯೇ ಅಮ್ಮನ ಅನಾರೋಗ್ಯದ ಸುದ್ದಿ ಅವರನ್ನು ಕಂಗೆಡಿಸಿದೆ. ಮತ್ತೊಂದೆಡೆ ಬೀಡು ಬೀಸಾಗಿ ಬ್ಯಾಟ್ ಮಾಡುತ್ತಿರುವ ಇಂಗ್ಲೆಂಡ್ ಗೆ ಕಡಿವಾಣ ಹಾಕಲು ಇಂದು ಅಶ‍್ವಿನ್ ಇರಲೇಬೇಕಿತ್ತು. ಅವರ ಅನುಪಸ್ಥಿತಿ ಟೀಂ ಇಂಡಿಯಾಗೂ ಕಾಡಲಿದೆ.