ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಡುವೆ ರವಿಚಂದ್ರನ್ ಅಶ್ವಿನ್ ಕೌಟುಂಬಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ. ಅಶ್ವಿನ್ ಪಂದ್ಯದ ನಡುವೆ ತಂಡ ಬಿಟ್ಟರೆ ನಿಯಮ ಏನು ಹೇಳುತ್ತದೆ?
ನಿನ್ನೆಯಷ್ಟೇ 500 ನೇ ವಿಕೆಟ್ ಕಬಳಿಸಿದ ಬಳಿಕ ರವಿಚಂದ್ರನ್ ಅಶ್ವಿನ್ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ತಾಯಿಗೆ ಅನಾರೋಗ್ಯದ ಸುದ್ದಿ ತಿಳಿದು ತಕ್ಷಣವೇ ಅಶ್ವಿನ್ ಮನೆಗೆ ಮರಳಿದ್ದಾರೆ. ಅಶ್ವಿನ್ ಗೈರು ಟೀಂ ಇಂಡಿಯಾಕ್ಕೆ ಇಂದು ಕಾಡಲಿದೆ. ಆದರೆ ಒಬ್ಬ ಆಟಗಾರ ಪಂದ್ಯದ ನಡುವೆ ಹೊರನಡೆದರೆ ನಿಯಮ ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ.
ಅಶ್ವಿನ್ ಹೊರನಡೆದಿರುವುದರಿಂದ ಭಾರತ 10 ಆಟಗಾರರೊಂದಿಗೆ ಪಂದ್ಯವಾಡಬೇಕಾಗುತ್ತದೆ. ನಿಯಮಾನುಸಾರ 11 ಆಟಗಾರರ ಪೈಕಿ ಓರ್ವನಿಗೆ ಗಾಯವಾದರೆ ಅಥವಾ ಅನಾರೋಗ್ಯವಾದರೆ ಮಾತ್ರ ಬದಲಿ ಆಟಗಾರನನ್ನು ನೀಡಬಹುದಾಗಿದೆ. ಆದರೆ ಇದರ ಹೊರತಾಗಿ ಯಾವುದೇ ಕಾರಣಕ್ಕೂ ಬದಲಿ ಆಟಗಾರನನ್ನು ನೀಡಲಾಗುವುದಿಲ್ಲ. ಬದಲಿ ಆಟಗಾರ ನಾಯಕನಾಗಿ ಅಥವಾ ಬೌಲರ್ ಆಗಿ ಕಣಕ್ಕಿಳಿಯುವಂತಿಲ್ಲ. ಅಂಪಾಯರ್ ಒಪ್ಪಿದರೆ ವಿಕೆಟ್ ಕೀಪರ್ ಆಗಿ ಮಾತ್ರ ಕಣಕ್ಕಿಳಿಯಬಹುದು. ಇದೀಗ ಭಾರತಕ್ಕೆ ಈ ಟೆಸ್ಟ್ ಪಂದ್ಯದಲ್ಲಿ ಬದಲಿ ಆಟಗಾರನನ್ನು ನೀಡಬೇಕಾದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ ಒಪ್ಪಿಗೆ ಬೇಕಾಗುತ್ತದೆ.
ಸದ್ಯಕ್ಕೆ ಅಶ್ವಿನ್ ಸ್ಥಾನಕ್ಕೆ ಬದಲಿ ಆಟಗಾರ ಬಂದರೂ ಆತ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಲು ಸಾಧ‍್ಯವಿಲ್ಲ. ಕೇವಲ ಫೀಲ್ಡಿಂಗ್ ಮಾತ್ರ ಮಾಡಬಹುದಾಗಿದೆ. ಅದೂ ಬೆನ್ ಸ್ಟೋಕ್ಸ್ ಒಪ್ಪಿದರೆ ಮಾತ್ರ. ಒಂದು ವೇಳೆ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅಥವಾ ಅಕ್ಸರ್ ಪಟೇಲ್ ಕಣಕ್ಕಿಳಿದರೆ ಅವರು ಬೆನ್ ಸ್ಟೋಕ್ಸ್ ಒಪ್ಪಿದರೆ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟ್ ಅಥವಾ ಬೌಲಿಂಗ್ ಮಾತ್ರ ಮಾಡಬಹುದಾಗಿದೆ.