ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 319 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 126 ರನ್ ಗಳ ಮುನ್ನಡೆ ಲಭಿಸಿತು. ಭಾರೀ ಮುನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರೂ 19 ರನ್ ಗಳಿಸುವಷ್ಟರಲ್ಲಿ ಜೋ ರೂಟ್ ಗೆ ವಿಕೆಟ್ ಒಪ್ಪಿಸಿದರು.
ಆಗ ಭಾರತದ ಮೊತ್ತ 30 ರನ್ ಆಗಿತ್ತು. ಇದಾದ ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ ಜೋಡಿ ಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಗಿದೆ. ಮೊದಲ ಇನಿಂಗ್ಸ್ ನಲ್ಲಿ ಇಬ್ಬರೂ ವೈಫಲ್ಯ ಅನುಭವಿಸಿದ್ದರು. ಆದರೆ ಅದನ್ನು ಎರಡನೇ ಇನಿಂಗ್ಸ್ ನಲ್ಲಿ ಸಮಗೊಳಿಸಿದರು. ಜೈಸ್ವಾಲ್ ಕಳೆದ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ಇಂದು ಆರಂಭದಲ್ಲಿ ಕೊಂಚ ನಿಧಾನಿಯಾದರೂ ಆಟಕ್ಕೆ ಕುದುರಿದ ನಂತರ ಭರ್ಜರಿ ಹೊಡೆತಗಳಿಗೆ ಕೈ ಹಾಕಿದ ಜೈಸ್ವಾಲ್ ಇತ್ತೀಚೆಗಿನ ವರದಿ ಬಂದಾಗ 103 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಗಿಲ್ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಭಾರತಕ್ಕೆ ಇತ್ತೀಚೆಗಿನ ವರದಿ ಬಂದಾಗ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ್ದು 298 ರನ್ ಗಳ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಹೀಗಾಗಿ ಭಾರತ ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.