IND vs ENG test: ಇಂಗ್ಲೆಂಡ್ ನಂತೇ ಬೇಝ್ ಬಾಲ್ ಆಟಕ್ಕೆ ಮುಂದಾದ ರೋಹಿತ್ ಶರ್ಮಾ

Krishnaveni K

ಶನಿವಾರ, 17 ಫೆಬ್ರವರಿ 2024 (13:50 IST)
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 319 ರನ್ ಗಳಿಗೆ ಆಲೌಟ್ ಆಗಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 445 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 319 ರನ್ ಗಳಿಸಲಷ್ಟೇ ಶಕ್ತವಾಗಿದೆ. ಇದರೊಂದಿಗೆ ಭಾರತಕ್ಕೆ 126 ರನ್ ಗಳ ಮಹತ್ವದ ಮುನ್ನಡೆ ಸಿಕ್ಕಿದೆ. ನಿನ್ನೆ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇಂದು ಉಳಿದ 8 ವಿಕೆಟ್ ಗಳನ್ನು 112 ರನ್ ಗಳಿಗೆ ಕಳೆದುಕೊಂಡಿದೆ. ನಿನ್ನೆ ಶತಕ ಗಳಿಸಿದ್ದ ಬೆನ್ ಡಕೆಟ್ ಇಂದು 153 ರನ್ ಗಳಿಸಿ ಔಟಾದರು. ಬಳಿಕ ಇಂಗ್ಲೆಂಡ್ ಕುಸಿತ ಆರಂಭವಾಯಿತು. ಈ ನಡುವೆ ನಾಯಕ ಬೆನ್ ಸ್ಟೋಕ್ಸ್ ಕೊಂಚ ಪ್ರತಿರೋಧ ತೋರಿದರೂ 41 ರನ್ ಗಳಿಸುವಷ್ಟರಲ್ಲಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಕುಲದೀಪ್ ಯಾದವ್ ಸ್ಪಿನ್ ಹೊಣೆ ಹೊತ್ತರು. ಪ್ರಮುಖ 2 ವಿಕೆಟ್ ಕಬಳಿಸಿ ಕುಲದೀಪ್ ಇಂಗ್ಲೆಂಡ್ ಕುಸಿತಕ್ಕೆ ನಾಂದಿ ಹಾಡಿದರು. ಬಳಿಕ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಬಾಲ ಕತ್ತರಿಸಿದರು.  ಸಿರಾಜ್ 4 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2, ಜಸ್ಪ್ರೀತ್ ಬುಮ್ರಾ, ಅಶ್ವಿನ್ ತಲಾ 1 ವಿಕೆಟ್ ಹಂಚಿಕೊಂಡರು.

ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 30 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಇಂಗ್ಲೆಂಡಿಗರಂತೇ ಬೇಝ‍್ ಬಾಲ್ ಶೈಲಿಯ ಆಟಕ್ಕೆ ಕೈ ಹಾಕಿದ್ದು 19 ರನ್ ಗಳಿಸಿದ್ದಾರೆ. ಇದರಲ್ಲಿ 3 ಬೌಂಡರಿ ಸೇರಿದೆ. ಆದರೆ ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ 41 ಎಸೆತ ಎದುರಿಸಿ 10 ರನ್ ಗಳಿಸಿ ಸಾಥ್ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ