19 ವರ್ಷದೊಳಗಿನವರ ಏಷ್ಯಾಕಪ್‌ ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ: ಬಾಂಗ್ಲಾದೇಶಕ್ಕೆ ಕಿರೀಟ

Sampriya

ಭಾನುವಾರ, 8 ಡಿಸೆಂಬರ್ 2024 (18:27 IST)
Photo Courtesy X
ದುಬೈ: ಹಾಲಿ ಚಾಂಪಿಯನ್‌ ಬಾಂಗ್ಲಾದೇಶ ತಂಡವು ಏಷ್ಯಾಕಪ್ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು 59 ರನ್‌ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, 49.1 ಓವರ್‌ಗಳಲ್ಲಿ 198 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಭಾರತ, 35.2 ಓವರ್‌ಗಳಲ್ಲಿ 139 ರನ್‌ ಗಳಿಸಿ ಸರ್ವಪತನ ಕಂಡಿತು.


ಭಾರತದ ಬ್ಯಾಟರ್‌ಗಳು ದಿಟ್ಟ ಆಟವಾಡುವಲ್ಲಿ ವಿಫಲರಾದರು. ಆರಂಭಿಕ ಆಟಗಾರರಾದ ಆಯುಷ್‌ ಮ್ಹಾತ್ರೆ ಮತ್ತು ವೈಭವ್‌ ಸೂರ್ಯವಂಶಿ, ತಂಡದ ಮೊತ್ತ 24 ರನ್‌ ಆಗುವಷ್ಟರಲ್ಲೇ ಪೆವಿಲಿಯನ್‌ಗೆ ವಾಪಸ್‌ ಆದರು. ನಂತರವೂ ದೊಡ್ಡ ಇನಿಂಗ್ಸ್ ಕಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ.


ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಪಡೆಗೂ ಉತ್ತಮ ಆರಂಭ ಸಿಗಲಿಲ್ಲ. ಮೊಹಮ್ಮದ್‌ ಶಿಹಾಬ್‌ ಜೇಮ್ಸ್‌ (40 ರನ್‌) ಮತ್ತು ಮೊಹಮ್ಮದ್‌ ರಿಜಾನ್‌ ಹೊಸಾನ್‌ (47 ರನ್‌) 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ವಿಕೆಟ್‌ ಕೀಪರ್‌ ಮಹಮ್ಮದ್‌ ಪರಿದ್‌ ಹಸನ್‌ ಪಯ್ಸಾಲ್‌ ಸಹ (39 ರನ್‌) ಉಪಯುಕ್ತ ಆಟವಾಡಿದರು. ಹೀಗಾಗಿ ತಂಡದ ಮೊತ್ತ ಇನ್ನೂರರ ಸನಿಹಕ್ಕೆ ತಲುಪಲು ಸಾಧ್ಯವಾಯಿತು.

ಏಷ್ಯಾಕಪ್ 19 ವರ್ಷದೊಳಗಿನವರ ಟೂರ್ನಿಗಳಲ್ಲಿ ಭಾರತ ಏಳು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಬಾಂಗ್ಲಾ ಪಡೆ ಎರಡು ಸಲ ಮತ್ತು ಅಫ್ಗಾನಿಸ್ತಾನ ಒಂದು ಬಾರಿ ಗೆದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ