ಕಾಮನ್ ವೆಲ್ತ್ ಗೇಮ್ಸ್: ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಹರ್ಮನ್ ಪ್ರೀತ್ ಕೌರ್ ಪಡೆ

ಸೋಮವಾರ, 8 ಆಗಸ್ಟ್ 2022 (08:10 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ಕ್ರಿಕೆಟ್ ನಲ್ಲಿ ಫೈನಲ್ ಗೇರಿದ್ದ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ 9 ರನ್ ಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಪಾಯಕಾರಿ ಬ್ಯಾಟಿಗ ಹೀಲೇ 7 ರನ್ ಗಳಿಸಿ ಔಟಾದರೂ ಮೂನಿ 61 ರನ್ ಗಳ ಸ್ಪೋಟಕ ಇನಿಂಗ್ಸ್ ಆಡಿದರು. ಲ್ಯಾನಿಂಗ್ 36 ರನ್ ಗಳಿಸಿದರು. ಭಾರತದ ಪರ ರೇಣುಕಾ ಸಿಂಗ್, ಸ್ನೇಹ ರಾಣಾ ತಲಾ 2 ವಿಕೆಟ್ ಕಬಳಿಸಿದರೆ ದೀಪ್ತಿ ಶರ್ಮಾ, ರಾಧಾ ಯಾದವ್ ತಲಾ 1 ವಿಕೆಟ್ ಕಬಳಿಸಿದರು.

ಈ ಮೊತ್ತವನ್ನು ಬೆನ್ನತ್ತಿದ ಭಾರತೀಯರಿಗೆ ಆರಂಭಿಕರು ಕೈಕೊಟ್ಟಿದ್ದು ದುಬಾರಿಯಾಯಿತು.  ಇನ್ ಫಾರ್ಮ್ ಬ್ಯಾಟಿಗ ಸ್ಮೃತಿ ಮಂಧನಾ ಕೇವಲ 6 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಶಫಾಲಿ ವರ್ಮಾ 11 ರನ್ ಗೆ ಔಟಾದರು. ಆದರೆ ಬಳಿಕ ಜೆಮಿಮಾ ರೊಡ್ರಿಗಸ್ 33, ನಾಯಕಿ ಹರ್ಮನ್ ಪ್ರೀತ್ ಕೌರ್ 63 ರನ್ ಗಳಿಸಿ ಹೋರಾಡಿದರೂ ಅಂತಿಮವಾಗಿ ಭಾರತಕ್ಕೆ 19.3 ಓವರ್ ಗಳಲ್ಲಿ 152 ರನ್ ಗಳಿಸಲಷ್ಟೇ ಸಾಧ‍್ಯವಾಯಿತು. ಕೊನೆಯಲ್ಲಿ ಮತ್ತೆ ಒತ್ತಡ ನಿಭಾಯಿಸಲಾಗದೇ ಭಾರತ ಸೋತಿತು. ಇದರೊಂದಿಗೆ  ಚಿನ್ನದ ಪದಕ ಆಸ್ಟ್ರೇಲಿಯಾ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ