INDvsENG test: ಜಡೇಜಾಗೂ ದಕ್ಕದ ಶತಕ, ಭಾರತ 436 ಕ್ಕೆ ಆಲೌಟ್

Krishnaveni K

ಶನಿವಾರ, 27 ಜನವರಿ 2024 (10:30 IST)
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 436 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ 190 ರನ್ ಗಳ ಮುನ್ನಡೆ ಸಾಧಿಸಿದೆ.

ನಿನ್ನೆ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ ದಿನದಾಟ ಮುಗಿಸಿದ್ದ ಭಾರತ ಇಂದು ಸೆಟ್ ಆಗಿದ್ದ ಬ್ಯಾಟಿಗ ರವೀಂದ್ರ ಜಡೇಜಾ ವಿಕೆಡಟ್ ಕಳೆದುಕೊಂಡಿತು. ನಿನ್ನೆ 81 ರನ್ ಗಳಿಸಿ ಅಜೇಯರಾಗುಳಿದಿದ್ದ ಜಡೇಜಾ ಇಂದು ಶತಕ ಗಳಿಸುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಜೋ ರೂಟ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಆಗ ಅವರ ಸ್ಕೋರ್ 87 ರನ್ ಆಗಿತ್ತು. ಈ ಮೂಲಕ ಜಡೇಜಾ ಕೂಡಾ ಶತಕ  ಮಿಸ್ ಮಾಡಿಕೊಂಡು ನಿರಾಸೆ ಅನುಭವಿಸಿದರು.

ಇನ್ನೊಂದೆಡೆ ನಿನ್ನೆ ಅಜೇಯರಾಗುಳಿದಿದ್ದ ಅಕ್ಷರ್ ಪಟೇಲ್ ಇಂದು 44 ರನ್ ಗಳಿಸಿ ಕೊನೆಯವರಾಗಿ ಔಟಾದರು. ಇಂದು ಉರುಳಿದ ಮೂರು ವಿಕೆಟ್ ಗಳ ಪೈಕಿ ಎರಡು  ವಿಕೆಟ್ ಜೋ ರೂಟ್ ಪಾಲಾಯಿತು. ಅದೂ ಜಡೇಜಾ ಮತ್ತು ಬುಮ್ರಾರನ್ನು ಬೆನ್ನು ಬೆನ್ನಿಗೇ ಔಟ್ ಮಾಡಿದ ರೂಟ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಪಡೆದಿದ್ದರು. ಆದರೆ ಅದನ್ನು ಮೊಹಮ್ಮದ್ ಸಿರಾಜ್ ತಡೆದರು. ರೂಟ್ ಒಟ್ಟು 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ಪರ ಯಶಸ್ವೀ ಬೌಲರ್ ಎನಿಸಿಕೊಂಡರು.

ವಿಪರ್ಯಾಸವೆಂದರೆ ಭಾರತದ ಈ ಇನಿಂಗ್ಸ್ ನಲ್ಲಿ ಮೂವರು ಬ್ಯಾಟಿಗರು ಶತಕವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಯಶಸ್ವಿ ಜೈಸ್ವಾಲ್ 80 ರನ್ ಗಳಿಸಿದ್ದರೆ, ಕೆಎಲ್ ರಾಹುಲ್ 86 ರನ್ ಗಳಿಸಿ ಔಟಾಗಿದ್ದರು. ಆದರೆ ಜಡೇಜಾ ಕೂಡಾ 87 ರನ್ ಗೆ ಔಟಾಗುವ ಮೂಲಕ ಶತಕ ಮಿಸ್ ಮಾಡಿಕೊಂಡ ಮೂರನೆಯವರೆನಿಸಿಕೊಂಡರು.

ಇಂಗ್ಲೆಂಡ್ ಮೊದಲ ಇನಿಂಗ್ಸ್ 246 ರನ್ ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಭಾರತಕ್ಕೆ ಈಗ 190 ರನ್ ಗಳ ಮಹತ್ವದ ಮುನ್ನಡೆ ಸಿಕ್ಕಿದೆ. 190 ರನ್ ಗಳ ಮುನ್ನಡೆ ಸಿಕ್ಕಿಯೂ ಭಾರತ ಸೋತಿದ್ದು ಕೇವಲ ಒಂದು ಬಾರಿ ಮಾತ್ರ. ಇಂದು ಪಂದ್ಯದ ಮೂರನೇ ದಿನವಾಗಿದ್ದು ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ