ಮೊಹಾಲಿ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ರನ್ ಗಳಿಂದ ಗೆದ್ದ ಖುಷಿಯಲ್ಲಿರುವಾಗಲೇ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ದಂಡದ ಶಿಕ್ಷೆ ನೀಡಿದೆ.
ಐಪಿಎಲ್ ನಲ್ಲಿ ನಿಧಾನಗತಿಯ ಓವರ್ ನಡೆಸಿದ ತಪ್ಪಿಗೆ ಬಿಸಿಸಿಐ ದಂಡದ ರೂಪದಲ್ಲಿ ಶಿಕ್ಷೆ ನೀಡುತ್ತಿದೆ. ಇದೀಗ ಹಾರ್ದಿಕ್ ಪಡೆ ಪಂಜಾಬ್ ವಿರುದ್ಧ ನಿಧಾನಗತಿಯ ಓವರ್ ನಡೆಸಿ ತಪ್ಪು ಮಾಡಿದೆ. ಇದೇ ಕಾರಣಕ್ಕೆ ನಾಯಕ ಹಾರ್ದಿಕ್ ಗೆ ಬಿಸಿಸಿಐ ನಿಯಮಾನುಸಾರ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ನಿಧಾನಗತಿಯ ಓವರ್ ನಡೆಸಿದ್ದರಿಂದ ಹಾರ್ದಿಕ್ ಪಡೆ ನಿನ್ನೆ ಕೊನೆಯ ಎರಡು ಓವರ್ ಗಳಲ್ಲಿ ಹೊರಗೆ ಐವರ ಬದಲಾಗಿ ನಾಲ್ವರು ಫೀಲ್ಡರ್ ಗಳನ್ನು ಮಾತ್ರ ನಿಲ್ಲಿಸಲು ಅವಕಾಶ ನೀಡಲಾಗಿದೆ. ಇದು ಹಾರ್ದಿಕ್ ಪಡೆ ಮಾಡಿರುವ ಮೊದಲ ತಪ್ಪಾಗಿದ್ದರಿಂದ 12 ಲಕ್ಷ ರೂ. ದಂಡ ಮಾತ್ರ ವಿಧಿಸಲಾಗಿದೆ.
ನಿಧಾನಗತಿಯ ಓವರ್ ಮಾಡಿದ್ದಕ್ಕೆ ಐಪಿಎಲ್ ನಲ್ಲಿ ದುಬಾರಿ ಶಿಕ್ಷೆಯಿದೆ. ಮೊದಲ ಬಾರಿ ತಪ್ಪು ಮಾಡಿದರೆ 12 ಲಕ್ಷ, ಎರಡನೇ ಬಾರಿ ತಪ್ಪು ಪುನರಾವರ್ತನೆಯಾದರೆ 24 ಲಕ್ಷ ರೂ. ಮತ್ತು ಮೂರನೇ ಬಾರಿ ನಿಧಾನಗತಿ ಓವರ್ ಮಾಡಿದರೆ ನಾಯಕ ಒಂದು ಪಂದ್ಯ ನಿಷೇಧಕ್ಕೊಳಗಾಗಬಹುದಾಗಿದೆ. ಈಗಾಗಲೇ ಹಲವು ನಾಯಕರು ಈ ಟೂರ್ನಿಯಲ್ಲಿ ದಂಡ ತೆತ್ತಿದ್ದಾರೆ. ಆ ಲಿಸ್ಟ್ ಗೆ ಈಗ ಹಾರ್ದಿಕ್ ಕೂಡಾ ಸೇರ್ಪಡೆಯಾಗಿದ್ದಾರೆ.