ರಾಹುಲ್ ದ್ರಾವಿಡ್ ಕೋಚ್ ಅವಧಿ ಬಗ್ಗೆ ನಿಜ ಬಹಿರಂಗಪಡಿಸಿದ ಜಯ್ ಶಾ
ಭಾನುವಾರ, 10 ಡಿಸೆಂಬರ್ 2023 (10:03 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಎರಡನೇ ಅವಧಿಗೆ ಮುಂದುವರಿದಿದ್ದಾರೆ. ಆದರೆ ಅವರ ಕೋಚ್ ಅವಧಿ ಎಷ್ಟು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.
ಈ ಬಗ್ಗೆ ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಏಕದಿನ ವಿಶ್ವಕಪ್ ನಲ್ಲಿ ತೋರಿದ ಅದ್ಭುತ ನಿರ್ವಹಣೆ ಹಿನ್ನಲೆಯಲ್ಲಿ ರಾಹುಲ್ ದ್ರಾವಿಡ್ ರನ್ನು ಮತ್ತೆ ಕೋಚ್ ಆಗಿ ಮುಂದುವರಿಯಲು ಕೇಳಿಕೊಳ್ಳಲಾಗಿತ್ತು.
ಅದರಂತೆ ದ್ರಾವಿಡ್ ಈಗ ದ.ಆಫ್ರಿಕಾ ವಿರುದ್ಧದ ಸರಣಿಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಎಷ್ಟು ಸಮಯದವರೆಗೆ ಕೋಚ್ ಆಗಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.
ಈ ಬಗ್ಗೆ ಮಾಧ‍್ಯಮಗಳಿಗೆ ಪ್ರತಿಕ್ರಿಯಿಸಿರುವ ಜಯ್ ಶಾ ನಾವು ದ್ರಾವಿಡ್ ರನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. ಆದರೆ ನಾವಿಬ್ಬರೂ ಒಪ್ಪಂದದ ಬಗ್ಗೆ ಮಾತುಕತೆ ನಡೆಸಬೇಕಿದೆಯಷ್ಟೇ. ವಿಶ್ವಕಪ್ ಮುಗಿದ ಬಳಿಕ ನಮಗೆ ಈ ಬಗ್ಗೆ ಕೂತು ಮಾತನಾಡಲೂ ಸಮಯ ಸಿಕ್ಕಿಲ್ಲ. ದ್ರಾವಿಡ್ ಮತ್ತು ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಇದೇ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ತೀರ್ಮಾನ ಮಾಡಿದೆವು. ಆದರೆ ಅವಧಿ ಎಷ್ಟು ಸಮಯ ಎಂದು ದ.ಆಫ್ರಿಕಾ ಪ್ರವಾಸದಿಂದ ದ್ರಾವಿಡ್ ವಾಪಸ್ ಆದ ಮೇಲೆ ತೀರ್ಮಾನಿಸಲಿದ್ದೇವೆ ಎಂದಿದ್ದಾರೆ.