ನವದೆಹಲಿ: ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಗಳಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಕೆಲವು ಹೊಸ ಮುಖಗಳನ್ನು ಆರಿಸಲಾಗಿದೆ. ಕೆ.ಎಲ್. ರಾಹುಲ್, ಯಜುವೇಂದ್ರ ಚಹಲ್, ಫೈಜ್ ಫಜಲ್ ಅವರಿಗೆ ಸೀಮಿತ ಓವರುಗಳ ಸ್ವರೂಪದಲ್ಲಿ ಸಾಮರ್ಥ್ಯ ಸಾಬೀತಿಗೆ ಅವಕಾಶ ನೀಡಲಾಗಿದ್ದು, ಶಾರ್ಜುಲ್ ಥಾಕುಲ್ ಅವರನ್ನು ಟೆಸ್ಟ್ ಪಂದ್ಯಗಳಲ್ಲಿ ಪೇಸ್ ಲೈನ್ ಅಪ್‌ಗೆ ಬಲ ತುಂಬಲು ಸೇರ್ಪಡೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳ ಚೊಚ್ಚಲ ಪ್ರವೇಶಕ್ಕೆ ಈ ಆಟಗಾರರ ಸಾಧನೆ ಕೆಳಗೆ ನೀಡಲಾಗಿದೆ.
ಮಂದೀಪ್ ಸಿಂಗ್: ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಧಿಕ ರನ್ ಸ್ಕೋರ್ ಮಾಡಿದ ಪಂಜಾಬ್ ಆಟಗಾರ.ಏಳು ಪಂದ್ಯಗಳಲ್ಲಿ 394 ರನ್ 65. 66 ಸರಾಸರಿಯಲ್ಲಿ ಸಿಡಿಸಿದ್ದಾರೆ. 2015-16 ರಣಜಿ ಸೀಸನ್‌ನಲ್ಲಿ ಕೂಡ ಮಂದೀಪ್ ಎರಡನೇ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದಾರೆ. 9 ಪಂದ್ಯಗಳಲ್ಲಿ ಅವರು 498 ರನ್ ಸ್ಕೋರ್ ಮಾಡಿದ್ದು ಎರಡು ಶತಕಗಳನ್ನು ಮತ್ತು 2 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಫೈಜ್ ಫಜಲ್: 30 ವರ್ಷದ ಫೈಜ್ ಫಜಲ್ ಮೊದಲ ನಾಲ್ಕು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ, ವಿದರ್ಭ ಬ್ಯಾಟ್ಸ್‌ಮನ್ 7 ಪಂದ್ಯಗಳಲ್ಲಿ 312 ರನ್ ಗಳಿಸಿದ್ದು, ಸರಾಸರಿ 52.00 ರಷ್ಟಿತ್ತು. ಸೈಯದ್ ಮುಸ್ತಕ್ ಅಲಿ ಟ್ರೋಫಿಯಲ್ಲಿ ಫಜಲ್ 9 ಪಂದ್ಯಗಳಿಂದ 205 ರನ್ ಸಿಡಿಸಿದ್ದರು. ಅವರ ಆಯ್ಕೆಯು ಆಟದ ಮೇಲೆ ಚೆನ್ನಾಗಿ ಗಮನಹರಿಸಿದರೆ ಉಳಿದವೆಲ್ಲಾ ಸುಸೂತ್ರವಾಗಿರುತ್ತದೆ ಎಂಬ ಸಂದೇಶವನ್ನು ಹಿರಿಯ ಆಟಗಾರರಿಗೆ ನೀಡುತ್ತದೆ.