ಬೆಟ್ಟದಂಥಾ ಮೊತ್ತವನ್ನು ಗುಡ್ಡೆ ಮಾಡಿದ ರಾಸ್ ಟೇಲರ್: ಟೀಂ ಇಂಡಿಯಾಗೆ ಸೋಲು

ಬುಧವಾರ, 5 ಫೆಬ್ರವರಿ 2020 (15:52 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವನ್ನು ರಾಸ್ ಟೇಲರ್ ಅಬ್ಬರದ ಶತಕ ಮತ್ತು ನಾಯಕ ಲಥಮ್ ಸಮಯೋಚಿತ ಆಟದಿಂದಾಗಿ ನ್ಯೂಜಿಲೆಂಡ್ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.


ಇದರೊಂದಿಗೆ ಭಾರತ-ನ್ಯೂಜಿಲೆಂಡ್ ಸರಣಿಯ ಮೊದಲ ಜಯ ಗಳಿಸಿದೆ. ಭಾರತ ನೀಡಿದ್ದ 347 ರನ್ ಗಳ ಬೃಹತ್ ಮೊತ್ತವನ್ನು ನ್ಯೂಜಿಲೆಂಡ್ ಬೆನ್ನತ್ತುವುದು ಕಷ್ಟವೆಂದೇ ನಂಬಲಾಗಿತ್ತು. ಆದರೆ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕಲ್ಸ್ ಉತ್ತಮ ಆರಂಭ ಒದಗಿಸಿದರು. ಹೆನ್ರಿ 78 ರನ್ ಗಳಿಸಿದರೆ ಗುಪ್ಟಿಲ್ 32 ರನ್ ಹೊಡೆದರು.

ಆದರೆ ಪಂದ್ಯಕ್ಕೆ ತಿರುವು ಸಿಕ್ಕಿದ್ದು ರಾಸ್ ಟೇಲರ್ ಮತ್ತು ಟಾಮ್ ಲಥಮ್ ಇನಿಂಗ್ಸ್. ಇಬ್ಬರೂ ಬಿರುಸಿನ ಆಟಕ್ಕೆ ಕೈ ಹಾಕಿ ಬೃಹತ್ ಮೊತ್ತವನ್ನು ಸುಲಭವಾಗಿಸಿದರು. ಈ ಪೈಕಿ ಟೇಲರ್ 89 ಎಸೆತಗಳಿಂದ ಅಜೇಯ 109 ರನ್ ಗಳಿಸಿದರೆ, ಲಥಮ್ 48 ಎಸೆತಗಳಿಂದ 69 ರನ್ ಗಳಿಸಿದರು. ಇದರಿಂದಾಗಿ ನ್ಯೂಜಿಲೆಂಡ್ 48.1 ಓವರ್ ಗಳಲ್ಲೇ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಗೆಲುವಿನ ದಡ ಮುಟ್ಟಿತು. ಅಷ್ಟೇ ಅಲ್ಲದೆ, ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿ ದಾಖಲೆ ಮಾಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ