Ranji Trophy: ರೋಹಿತ್ ಶರ್ಮಾ, ರಿಷಭ್ ಪಂತ್ ಸೇರಿದಂತೆ ಟೀಂ ಇಂಡಿಯಾ ಸ್ಟಾರ್ ಗಳ ರಣಜಿ ಮ್ಯಾಚ್ ಎಲ್ಲಿ ವೀಕ್ಷಿಸಬೇಕು

Krishnaveni K

ಗುರುವಾರ, 23 ಜನವರಿ 2025 (09:00 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಸ್ಟಾರ್ ಆಟಗಾರರು ಇಂದಿನಿಂದ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ.

ರೋಹಿತ್ ಶರ್ಮಾ ಬರೋಬ್ಬರಿ 10 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡುತ್ತಿದ್ದಾರೆ. ತಮ್ಮ ತವರು ಮುಂಬೈ ಪರ ಅವರು ಇಂದಿನಿಂದ ಕಣಕ್ಕಿಳಿಯುತ್ತಿದ್ದಾರೆ. ಜಮ್ಮು ಕಾಶ್ಮೀರ ವಿರುದ್ಧ ಮುಂಬೈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯುತ್ತಿದ್ದಾರೆ. ರೋಹಿತ್ ಜೊತೆಗೆ ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರೆಹಾನೆ ಕೂಡಾ ಮುಂಬೈ ಪರ ಆಡಲಿದ್ದಾರೆ.

ಇನ್ನು, ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ತಮ್ಮ ತವರು ದೆಹಲಿ ಪರ ಕಣಕ್ಕಿಳಿಯುತ್ತಿದ್ದಾರೆ. ದೆಹಲಿ ಮತ್ತು ಸೌರಾಷ್ಟ್ರ ನಡುವೆ ರಾಜ್ ಕೋಟ್ ನಲ್ಲಿ ಪಂದ್ಯ ನಡೆಯಲಿದೆ. ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಕರ್ನಾಟಕದ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ತವರು ಪಂಜಾಬ್ ಪರ ಕಣಕ್ಕಿಳಿಯುತ್ತಿದ್ದಾರೆ.

ವೇಗಿ ಮೊಹಮ್ಮದ್ ಸಿರಾಜ್ ಹೈದರಾಬಾದ್ ಪರ ಹಿಮಾಚಲ ಪ್ರದೇಶ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ. ಇನ್ನು ಹಿರಿಯ ಆಟಗಾರ ರವೀಂದ್ರ ಜಡೇಜಾ ಮತ್ತು ಚೇತೇಶ್ವರ ಪೂಜಾರ ಸೌರಾಷ್ಟ್ರ ಪರ ಆಡಲಿದ್ದಾರೆ.

ರಣಜಿ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ 18 ನೆಟ್ ವರ್ಕ್ ಅಥವಾ ಜಿಯೋ ಆಪ್ ನಲ್ಲಿ ಲೈವ್ ಆಗಿ ವೀಕ್ಷಿಸಬಹುದಾಗಿದೆ. ಎಲ್ಲಾ ಪಂದ್ಯಗಳೂ ಇದೀಗ 9.30 ಕ್ಕೆ ಆರಂಭವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ