ಟಿ20 ವಿಶ್ವಕಪ್ ನಲ್ಲಿ ಸಂಜು ಸ್ಯಾಮ್ಸನ್ ಗೆ ನಾನಾ..? ನೀನಾ ನೋಡೇಬಿಡೋಣ ಎಂದ ರಿಷಬ್ ಪಂತ್

Krishnaveni K

ಗುರುವಾರ, 18 ಏಪ್ರಿಲ್ 2024 (09:31 IST)
ಮುಂಬೈ: ಗುಜರಾತ್ ಟೈಟನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಿಷಬ್ ಪಂತ್ ಅದ್ಭುತ ಕೀಪಿಂಗ್ ನಡೆಸಿ ಟಿ20 ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡುತ್ತಿರುವ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.

ಐಪಿಎಲ್ ಮುಗಿದ  ತಕ್ಷಣ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಆಟಗಾರರ ಐಪಿಎಲ್ ಪ್ರದರ್ಶನವನ್ನೂ ಆಯ್ಕೆಗಾರರು ಗಮನಿಸುತ್ತಿದ್ದಾರೆ.

ಇದುವರೆಗೆ ಐಪಿಎಲ್ ನಲ್ಲಿ ಸಂಜು ಸ್ಯಾಮ್ಸನ್ ನಾಯಕರಾಗಿ, ಕೀಪರ್ ಆಗಿ, ಬ್ಯಾಟಿಗನಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಬಲ ಸ್ಪರ್ಧಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿದ್ದ ರಿಷಬ್ ಪಂತ್ ಈಗಷ್ಟೇ ಮರಳಿದ್ದು, ಇದುವರೆಗೆ ಐಪಿಎಲ್ ನಲ್ಲಿ ಅವರಿಂದ ಅದ್ಭುತವೆನ್ನುವ ಪ್ರದರ್ಶನ ಬಂದಿರಲಿಲ್ಲ.

ಹೀಗಾಗಿ ಅಭಿಮಾನಿಗಳು ರಿಷಬ್ ಪಂತ್ ಗಿಂದ ಸಂಜು ಸ್ಯಾಮ್ಸನ್ ಬೆಸ್ಟ್ ಎನ್ನಲು ಶುರು ಮಾಡಿದ್ದರು. ಆದರೆ ಈಗ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಹಿಂದುಗಡೆ ನಾಲ್ಕು ಬಲಿ ಪಡೆದ ರಿಷಬ್ ಬ್ಯಾಟಿಂಗ್ ನಲ್ಲೂ ಅಜೇಯರಾಗುಳಿಯುವ ಮೂಲಕ ಸಂಜು ಜೊತೆಗೆ ಸ್ಪರ್ಧೆಗೆ ಇಳಿದಿದ್ದಾರೆ.

ರಿಷಬ್ ಪಂತ್ ಈಗಾಗಲೇ ತಮ್ಮ ಹಳೆಯ ಫಾರ್ಮ್ ಗೆ ಬಂದಿರುವ ಸೂಚನೆ ನೀಡಿದ್ದಾರೆ. ಆ ಮೂಲಕ ಆಯ್ಕೆಗಾರರಿಗೆ ತನ್ನನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲು ಸ್ಪಷ್ಟ ಸಂದೇಶ ನೀಡಿದ್ದಾರೆ. ಒಂದು ವೇಳೆ ರಿಷಬ್ ಇದೇ ರೀತಿ ಫಾರ್ಮ್ ಮುಂದುವರಿಸಿದರೆ ಆಯ್ಕೆಗಾರರ ಮೊದಲ ಆಯ್ಕೆ ರಿಷಬ್ ಅವರೇ ಆಗಿರುತ್ತಾರೆ. ಆಗ ಸಂಜು ಮೇಲೆ ಒತ್ತಡ ಬೀಳಲಿದೆ. ಇದೀಗ ಭಾರತೀಯ ಮೂಲದ ಇಬ್ಬರೂ ಆಟಗಾರರ ನಡುವೆ ನಾನಾ—ನೀನಾ ಸ್ಪರ್ಧೆ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ