ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ತಂಡದಿಂದ ನಿವೃತ್ತಿಯಾಗಲು ಬಿಸಿಸಿಐ ಗಡುವು ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ರೋಹಿತ್ ಗಿರುವ ಒತ್ತಡ ಕೊಹ್ಲಿ ಮೇಲೆ ಯಾಕಿಲ್ಲ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೀಂ ಇಂಡಿಯಾದ ದಿಗ್ಗಜ ಆಟಗಾರರು. ಆದರೆ ಕೊಹ್ಲಿಗಿರುವ ಫ್ಯಾನ್ ಫಾಲೋವಿಂಗ್ ರೋಹಿತ್ ಗಿಲ್ಲದೇ ಇರಬಹುದು. ಆದರೆ ರೋಹಿತ್ ತಂಡಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಟ್ಟ ಕ್ಯಾಪ್ಟನ್.
ಆದರೆ ರೋಹಿತ್ ಗೆ ಚಾಂಪಿಯನ್ಸ್ ಟ್ರೋಫಿ ಬಳಿಕ ನಿವೃತ್ತಿಯಾಗಲು ಬಿಸಿಸಿಐ ಗಡುವು ನೀಡಿದೆ ಎನ್ನಲಾಗಿದೆ. ಇದಕ್ಕೆ ಬಹುಶಃ ಅವರ ನಾಯಕತ್ವವೇ ಕಾರಣವಾಗಿದೆ. ಮುಂಬರುವ ಏಕದಿನ ವಿಶ್ವಕಪ್ ಇರುವುದು ಎರಡು ವರ್ಷಗಳ ಬಳಿಕ. ಆ ವೇಳೆಗೆ ತಂಡಕ್ಕೆ ಹೊಸ ನಾಯಕನನ್ನು ತಯಾರು ಮಾಡಬೇಕಿದೆ. ಹೊಸ ನಾಯಕನನ್ನು ಬೆಳೆಸಬೇಕಾದರೆ ರೋಹಿತ್ ನಿವೃತ್ತಿಯಾಗಬೇಕು ಎಂಬುದು ಬಿಸಿಸಿಐ ನಿಲುವು. ಒಂದು ವೇಳೆ ರೋಹಿತ್ ಕೇವಲ ಬ್ಯಾಟಿಗನಾಗಿ ಮುಂದುವರಿಯಬೇಕಿದ್ದರೆ ಅವರು ದೊಡ್ಡ ಮೊತ್ತ ಗಳಿಸಲೇಬೇಕು.
ಆದರೆ ವಿರಾಟ್ ಕೊಹ್ಲಿಗೆ ಸದ್ಯಕ್ಕೆ ನಾಯಕತ್ವದ ಒತ್ತಡವಿಲ್ಲ. ಅವರು ಕೇವಲ ಆಟಗಾರನಾಗಿರುವುದರಿಂದ ತಮ್ಮ ಆಟದ ಬಗ್ಗೆ ಗಮನ ಕೇಂದ್ರೀಕರಿಸಿದರೆ ಸಾಕು. ಜೊತೆಗೆ ರೋಹಿತ್ ಗಿಂತ ಅವರು ಒಂದು ವರ್ಷ ಕಿರಿಯರು. ಜೊತೆಗೆ ಫಿಟ್ನೆಸ್ ನಲ್ಲೂ ನಂ.1 ಹೀಗಾಗಿ ಕೊಹ್ಲಿಗೆ ಸದ್ಯಕ್ಕೆ ವಿನಾಯ್ತಿ ನೀಡಲಾಗಿದೆ ಎನ್ನಲಾಗುತ್ತಿದೆ.