ನ್ಯೂಯಾರ್ಕ್: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಈಗಾಗಲೇ ನ್ಯೂಯಾರ್ಕ್ ನಲ್ಲಿ ಅಭ್ಯಾಸ ಆರಂಭಿಸಿದೆ. ಭಾರತ ತಂಡದ ಅಭ್ಯಾಸದ ವೇಳೆ ಆಲ್ ರೌಂಡರ್ ಶಿವಂ ದುಬೆಗೆ ನಾಯಕ ರೋಹಿತ್ ಶರ್ಮಾ ವಿಶೇಷವಾಗಿ ಸಲಹೆ ನೀಡಿದ್ದಾರೆ.
ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ರೋಹಿತ್ ಶರ್ಮಾ ಸ್ವೀಪ್ ಶಾಟ್ ಗಳಿಗೆ ಹೆಚ್ಚು ಆದ್ಯತೆ ನೀಡಿದರು. ರವೀಂದ್ರ ಜಡೇಜಾ, ಬುಮ್ರಾ, ಶಿವಂ ದುಬೆ ಮುಂತಾದವರು ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಿದ್ದಾರೆ.
ಈ ವೇಳೆ ಶಿವಂ ದುಬೆ ಬಳಿ ಕೆಲ ಹೊತ್ತು ವಿಶೇಷವಾಗಿ ಮಾತನಾಡಿದ ರೋಹಿತ್ ಶರ್ಮಾ ಬೌಲಿಂಗ್ ಬಗ್ಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಯಾವ ಏರಿಯಾದಲ್ಲಿ ಬಾಲ್ ಹಾಕಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡುತ್ತಿದ್ದುದು ಕಂಡುಬಂದಿದೆ.
ಇದನ್ನ ಗಮನಿಸಿದರೆ ಈ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಫಾರ್ಮ್ ನಲ್ಲಿರುವ ಹಾರ್ದಿಕ್ ಪಾಂಡ್ಯರನ್ನೂ ಸೈಡ್ ಲೈನ್ ಮಾಡಿ ಶಿವಂ ದುಬೆಗೆ ಅವಕಾಶ ನೀಡುವ ಬಗ್ಗೆ ರೋಹಿತ್ ಚಿಂತನೆ ನಡೆಸಿದ್ದಾರೆ ಎನ್ನಬಹುದು. ಶಿವಂ ದುಬೆ ಇದಕ್ಕೆ ಮೊದಲು ನಡೆದಿದ್ದ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಭಾರತದ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು. ಇದೇ ಕಾರಣಕ್ಕೆ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಈಗ ಮತ್ತೆ ಅಂತಹದ್ದೇ ಆಲ್ ರೌಂಡರ್ ಪ್ರದರ್ಶನವನ್ನು ತಂಡ ಅವರಿಂದ ನಿರೀಕ್ಷಿಸುತ್ತಿದೆ.