ಪಾಕಿಸ್ತಾನದ ಬ್ಯಾಟಿಂಗ್ ದೌರ್ಬಲ್ಯ ಬಟಾಬಯಲು : ಯೂನಿಸ್

ಮಂಗಳವಾರ, 26 ಜುಲೈ 2016 (12:56 IST)
ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡದ ನೀರಸ ಪ್ರದರ್ಶನವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್‌ಗಳಾದ ವಾಖರ್ ಯೂನಿಸ್ ಮತ್ತು ಶೋಯಬ್ ಅಕ್ತರ್ ಟೀಕಿಸಿದ್ದಾರೆ. ತಂಡದ ಬ್ಯಾಟಿಂಗ್ ಶಕ್ತಿ ಸಂಪೂರ್ಣ ಬಟಾಬಯಲಾಗಿದೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ಪಾಕಿಸ್ತಾನ ತಂಡವನ್ನು 330 ಭಾರೀ ಮೊತ್ತಗಳ ಅಂತರದಿಂದ ಸೋಲಿಸಿತ್ತು.
 
ಬ್ಯಾಟಿಂಗ್ ನುಚ್ಚುನೂರಾಗಿದ್ದಕ್ಕೆ ಯಾವುದೇ ಕ್ಷಮೆಯಿಲ್ಲ ಎಂದು ಹೇಳಿದ ಪಾಕಿಸ್ತಾನ್ ಮಾಜಿ ಕೋಚ್ ಯೂನಿಸ್ , ಬ್ಯಾಟಿಂಗ್ ಶಕ್ತಿಗೆ ಬೆನ್ನುಮೂಳೆಯಿಲ್ಲ ಎಂದು ಹೇಳುವ ಮಟ್ಟಕ್ಕೂ ತಲುಪಿದರು. ನಾವು ಈ ಟೆಸ್ಟ್ ಗೆಲ್ಲಬಹುದೆಂದು ಹೇಳುತ್ತಿಲ್ಲ. ಆದರೆ ಈ ರೀತಿ ಹೀನಾಯ ಸೋಲನ್ನು ಸೋಲಬಾರದು. ಬೆನ್ನುಮೂಳೆಯಿಲ್ಲದ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಬೌಲರುಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದರು. 
 
ವಿದೇಶಿ ತಂಡಗಳು ಪಾಕಿಸ್ತಾನಕ್ಕೆ ಪ್ರವಾಸ ಮಾಡದ ವಿಷಯವನ್ನು ಯುದ್ಧೋಪಾದಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ವಾಖರ್ ಹೇಳಿದರು.
 
ಯೋಜನೆಯ ಕೊರತೆ
ಇಡೀ ಪಂದ್ಯದಲ್ಲಿ ಯೋಜನೆಯ ಕೊರತೆ ಕಂಡುಬಂದಿದ್ದು, ನಿರೀಕ್ಷೆಯಂತೆ ನಮ್ಮ ಬ್ಯಾಟಿಂಗ್ ದೌರ್ಬಲ್ಯವನ್ನು ಇಂಗ್ಲೆಂಡ್ ಬೌಲರುಗಳು ಬಟಾಬಯಲು ಮಾಡಿದರು ಎಂದು ಅಕ್ತರ್ ತಿಳಿಸಿದರು. 
 
 ಬೌನ್ಸ್ ಆಗುವ ಪಿಚ್‌ನಲ್ಲಿ ನಮ್ಮ ಬ್ಯಾಟಿಂಗ್ ಬಣ್ಣ ಬಯಲಾಗಿದ್ದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಬೌನ್ಸ್ ಪಿಚ್‌ಗಳಲ್ಲಿ ನಮ್ಮ ಬ್ಯಾಟಿಂಗ್ ಸದಾ ತಿಣುಕಾಡುತ್ತದೆ ಎಂದು ಅಕ್ತರ್ ಹೇಳಿದರು.
 
 ಬೌಲರುಗಳ ಪ್ರದರ್ಶನ ಕೂಡ ತೀರಾ ನಿರಾಶಾದಾಯಕವಾಗಿತ್ತು. ಓಲ್ಡ್ ಟ್ರಾಫರ್ಡ್ ಪಿಚ್‌ನಲ್ಲಿ ಹೇಗೆ ಬೌಲ್ ಮಾಡಬೇಕು ಎಂಬ ಬಗ್ಗೆ ಯಾವುದೇ ಕಾರ್ಯಯೋಜನೆ ಇರಲಿಲ್ಲ ಎಂದು ಅಕ್ತರ್ ಹೇಳಿದರು.
 
ಈ ಸೋಲು ಪಾಕಿಸ್ತಾನ ಕ್ರಿಕೆಟ್ ಸಂಕಷ್ಟದ ಮುಂದುವರಿಕೆ ಎಂದು ಮಾಜಿ ಟೆಸ್ಟ್ ನಾಯಕ ರಮೀಜ್ ರಾಜಾ ಹೇಳಿದರು. ವಿವಿಧ ಪರಿಸ್ಥಿತಿಗಳಿಗೆ ನಮ್ಮ ಆಟಗಾರರು ತಕ್ಷಣವೇ ಹೊಂದಿಕೊಳ್ಳುವುದಿಲ್ಲ ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ