ಕಾನ್ಪುರ ಟೆಸ್ಟ್: ಸ್ಪಿನ್ನರ್ ಗಳಿಂದ ಪಂದ್ಯ ಟೀಂ ಇಂಡಿಯಾ ಹಿಡಿತದಲ್ಲಿ
ಶನಿವಾರ, 27 ನವೆಂಬರ್ 2021 (16:38 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಸ್ಪಿನ್ನರ್ ಗಳ ದಾಳಿಯಿಂದ ಪಂದ್ಯ ಟೀಂ ಇಂಡಿಯಾ ಹಿಡಿತದಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ದ್ವಿತೀಯ ಸರದಿಯಲ್ಲಿ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದ್ದು, ಒಟ್ಟಾರೆ 63 ರನ್ ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಅದ್ಭುತ ಆರಂಭವೇನೋ ಪಡೆದಿತ್ತು. ಆದರೆ ಈ ಆಟ ಆರಂಭಿಕರಿಗೇ ಸೀಮಿತವಾಯ್ತು. ರಾಸ್ ಟೇಲರ್ 11 ರನ್ ಗಳಿಗೆ ಅಕ್ಸರ್ ಪಟೇಲ್ ಗೆ ವಿಕೆಟ್ ಒಪ್ಪಿಸುವುದರೊಂದಿಗೆ ಎದುರಾಳಿಗಳಿಗೆ ಕುಸಿತ ಆರಂಭವಾಯ್ತು. ನಾಯಕ ಕೇನ್ ವಿಲಿಯಮ್ಸನ್ ಇನಿಂಗ್ಸ್ 18 ರನ್ ಗೇ ಕೊನೆಯಾಗಿತ್ತು. ಕೊನೆಯಲ್ಲಿ ಜೆಮಿಸನ್ 23 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಗಳೂ ನಿಂತು ಆಡುವ ಧೈರ್ಯ ಮಾಡಲಿಲ್ಲ. ಮಾರಕ ದಾಳಿ ಸಂಘಟಿಸಿದ ಅಕ್ಸರ್ ಪಟೇಲ್ 5 ವಿಕೆಟ್ ಗಳ ಗೊಂಚಲು ಪಡೆದರೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ಪ್ರಮುಖ ವಿಕೆಟ್ ಕಿತ್ತರು. ಇನ್ನು ಉಳಿದ ಎರಡು ವಿಕೆಟ್ ಗಳನ್ನು ಜಡೇಜಾ, ಉಮೇಶ್ ಯಾದವ್ ಹಂಚಿಕೊಂಡರು.
ಅಂತಿಮವಾಗಿ ನ್ಯೂಜಿಲೆಂಡ್ 296 ರನ್ ಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ನಲ್ಲಿ 49 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಶುಬ್ನಂ ಗಿಲ್ (1) ರೂಪದಲ್ಲಿ ಆರಂಭದಲ್ಲೇ ಆಘಾತ ಸಿಕ್ಕಿದೆ. ಇದೀಗ 4 ರನ್ ಗಳಿಸಿರುವ ಮಯಾಂಕ್ ಮತ್ತು 9 ರನ್ ಗಳಿಸಿರುವ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದಾರೆ.