ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್ ಗೆ ವಿರಾಟ್ ಕೊಹ್ಲಿಯನ್ನು ಹೊರಗಿಡಲು ಚಿಂತನೆ ನಡೆಸಿದ್ದವರಿಗೆ ಕಿಂಗ್ ಐಪಿಎಲ್ ನಲ್ಲಿ ಸರಿಯಾದ ಉತ್ತರ ನೀಡುತ್ತಿದ್ದಾರೆ.
ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಿಧಾನಗತಿಯ ಪಿಚ್ ಹೊಂದಿರುತ್ತದೆ. ಈ ಪಿಚ್ ಗಳು ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಸೂಕ್ತವಲ್ಲ. ಹೀಗಾಗಿ ಅವರನ್ನು ಹೊರಗಿಡಲು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಜೋರಾಗಿ ಹರಿದಾಡುತ್ತಿತ್ತು.
ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಏನಾದರೂ ಸರಿಯೇ ನನ್ನ ತಂಡದಲ್ಲಿ ಕೊಹ್ಲಿ ಇರಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದೂ ವರದಿಯಾಗಿತ್ತು. ತಮ್ಮನ್ನು ಹೊರಗಿಡಲು ಚಿಂತನೆ ನಡೆಸಿರುವ ವಿಚಾರ ಕೊಹ್ಲಿ ಕಿವಿಗೂ ಬಿದ್ದಿದೆ. ಕಳೆದ ಪಂದ್ಯದ ಬಳಿಕ ಅವರು ಇದೇ ವಿಚಾರವಾಗಿ ಮಾತನಾಡಿದ್ದರು.
ಆದರೆ ತಮ್ಮನ್ನು ಟೀಕೆ ಮಾಡುವವರಿಗೆ ಕೊಹ್ಲಿ ಬ್ಯಾಟ್ ಮೂಲಕ ತಕ್ಕ ಉತ್ತರ ನೀಡಿಯೇ ನೀಡುತ್ತಾರೆ. ಅದನ್ನೀಗ ಐಪಿಎಲ್ ನಲ್ಲೂ ಮಾಡಿದ್ದಾರೆ. ಐಪಿಎಲ್ ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ಸಿಡಿಸಿರುವ ಕೊಹ್ಲಿ ತಮ್ಮಲ್ಲಿ ಇನ್ನೂ ಟಿ20 ಆಡುವ ಕ್ಷಮತೆಯಿದೆ ಎಂದು ಸಾಬೀತುಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಅಜೇಯ 83 ರನ್ ಸಿಡಿಸಿದರು. ವಿಶ್ವ ಕ್ರಿಕೆಟ್ ನ ಕಿಂಗ್ ಎಂದೇ ಕರೆಯಿಸಿಕೊಳ್ಳುವ ಕೊಹ್ಲಿಗೆ ಇನ್ನು ಹೊಸದಾಗಿ ಸಾಬೀತುಪಡಿಸುವಂತದ್ದು ಏನೂ ಇಲ್ಲ. ಆದರೂ ತಮ್ಮನ್ನು ಟೀಕೆ ಮಾಡುವವರಿಗೆ ಅವರೀಗ ಸರಿಯಾಗಿಯೇ ಉತ್ತರ ನೀಡಿದ್ದಾರೆ ಎನ್ನಬಹುದು.