ರಿಷಬ್ ಪಂತ್ ಗಾಗಿ ಕೆಎಲ್ ರಾಹುಲ್ ಸೈಡ್ ಲೈನ್ ಮಾಡುವುದು ಬಿಡ್ತಾರಾ ಗೌತಮ್ ಗಂಭೀರ್

Krishnaveni K

ಶುಕ್ರವಾರ, 2 ಆಗಸ್ಟ್ 2024 (09:28 IST)
ಕೊಲಂಬೊ: ರಿಷಬ್ ಪಂತ್ ಫಿಟ್ ಆಗಿ ತಂಡಕ್ಕೆ ಬಂದ ಮೇಲೆ ತೀರಾ ಅನ್ಯಾಯಕ್ಕೊಳಗಾದ ಕ್ರಿಕೆಟಿಗ ಎಂದರೆ ಕನ್ನಡಿಗ ಕೆಎಲ್ ರಾಹುಲ್ ಎನ್ನಬಹುದು. ರಿಷಬ್ ಬಂದ ನಂತರ ಅವರು ಟಿ20 ಕ್ರಿಕೆಟ್ ನಿಂದ ಸಂಪೂರ್ಣವಾಗಿ ಸೈಡ್ ಲೈನ್ ಆಗಿದ್ದಾರೆ. ಈಗ ಗಂಭೀರ್ ಜಮಾನದಲ್ಲಾದರೂ ಅವರಿಗೆ ನ್ಯಾಯ ಸಿಗಬಹುದೇ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.

ಕೆಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಅತ್ಯಂತ ಕ್ಲಾಸ್ ಪ್ಲೇಯರ್. ಕೇವಲ ಬ್ಯಾಟಿಂಗ್ ಮಾತ್ರವಲ್ಲ, ವಿಕೆಟ್ ಕೀಪರ್ ಆಗಿಯೂ ಅದ್ಭುತ ನಿರ್ವಹಣೆ ತೋರುತ್ತಾರೆ. ಬಹುಶಃ ಅವರಿಗೆ ಸರಿಯಾಗಿ ಅವಕಾಶ ನೀಡುತ್ತಿದ್ದರೆ ಇಷ್ಟೊತ್ತಿಗಾಗಲೇ ಕೊಹ್ಲಿ, ರೋಹಿತ್ ಸಾಲಿಗೆ ಬಂದು ಬಿಡುತ್ತಿದ್ದರು.

ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ರಾಹುಲ್ ತಂಡದ ವಿಕೆಟ್ ಕೀಪರ್ ಬ್ಯಾಟಿಗ ಸ್ಥಾನದ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹಾಗಿದ್ದರೂ ಪಂತ್ ವಾಪಸ್ ಆದ ಮೇಲೆ ರಾಹುಲ್ ರನ್ನು ಟಿ20 ಕ್ರಿಕೆಟ್ ನಿಂದ ದೂರ ಮಾಡಲಾಯಿತು. ಇದಕ್ಕೆ ಆಯ್ಕೆಗಾರರು ಏನೇನೋ ಕಾರಣ ನೀಡಿದರು. ಆದರೆ ರಾಹುಲ್ ರಂತಹ ಕ್ಲಾಸ್ ಆಟಗಾರನಿಗೆ ಅನ್ಯಾಯವಾಯಿತು. ಸಂಜು ಸ್ಯಾಮ್ಸನ್ ಎಂಬ ಪ್ರತಿಭೆಗೆ ಪದೇ ಪದೇ ಅವಕಾಶ ಸಿಕ್ಕಿಯೂ ಅವರು ಬಳಸಿಕೊಳ್ಳಲು ವಿಫಲರಾದರು. ಇತ್ತ ಸಂಜು-ರಿಷಬ್ ನಡುವಿನ ಪೈಪೋಟಿಯಲ್ಲಿ ರಾಹುಲ್ ಗೆ ಅವಕಾಶವೇ ಇಲ್ಲದಾಯಿತು.

ಇದೀಗ ಏಕದಿನ ಮಾದರಿಗೆ ಬಹಳ ದಿನಗಳ ನಂತರ ರಾಹುಲ್ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ವಿಪರ್ಯಾಸವೆಂದರೆ ಈಗಲೂ ಅವರಂತಹ ಅನುಭವಿ, ಪ್ರತಿಭಾವಂತ ಆಟಗಾರ ರಿಷಬ್ ಪಂತ್ ರಂತಹ ಆಟಗಾರರ ಜೊತೆ ಸ್ಥಾನಕ್ಕಾಗಿ ಗುದ್ದಾಡಬೇಕಿದೆ. ಗೌತಮ್ ಗಂಭೀರ್ ಪ್ರತಿಭೆಗೆ ತಕ್ಕ ಮಣೆ ಹಾಕುವ ಮನಸ್ಸು ಮಾಡಿ ರಾಹುಲ್ ಗೆ ಸೂಕ್ತ ನ್ಯಾಯ ಕೊಡಿಸಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ