ಬ್ಯಾಟಿಂಗನ್ನು ಇನ್ನೊಂದು ಮಟ್ಟಕ್ಕೆ ಒಯ್ದ ಡಿ ವಿಲಿಯರ್ಸ್, ಕೊಹ್ಲಿ : ಗವಾಸ್ಕರ್

ಬುಧವಾರ, 25 ಮೇ 2016 (13:04 IST)
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದರು. ಇವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗನ್ನು ಇನ್ನೊಂದು ಮಟ್ಟಕ್ಕೆ ಒಯ್ದಿದೆ ಎಂದು ಶ್ಲಾಘಿಸಿದರು.
 
 ಆರ್‌ಸಿಬಿ ಗುಜರಾತ್ ಲಯನ್ಸ್ ವಿರುದ್ಧ ಒಂದು ಹಂತದಲ್ಲಿ 29ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಡಿ ವಿಲಿಯರ್ಸ್ ಅವರ 47 ಎಸೆತಗಳಲ್ಲಿ 79 ರನ್‌ಗಳ ಉಸಿರುಬಿಗಿ ಹಿಡಿಯುವಂತೆ ಮಾಡಿದ ಏಕಾಂಗಿ ಹೋರಾಟವು ತಂಡಕ್ಕೆ ಚೇತರಿಕೆ ನೀಡಿ ಗೆಲುವನ್ನು ತಂದುಕೊಟ್ಟಿತು.
 
ಸ್ವೀಪ್ ಪ್ಲೇಯಿಂಗ್ ಸ್ಥಾನದಿಂದ ಜಕಾತಿ ಬೌಲಿಂಗ್‌ನಲ್ಲಿ ಎಬಿ ಡಿವಿಲಿಯರ್ಸ್ ಸಿಕ್ಸರ್ ಬಾರಿಸಿದ್ದು ನಂಬಲಸಾಧ್ಯವಾಗಿತ್ತು. ಅವರು ಸ್ಕೂಪ್ ಆಡಬಹುದೆಂದು ನಾನು ಭಾವಿಸಿದ್ದೆ. ಆದರೆ ಅದು ಸ್ಕ್ವೇರ್‌ಲೆಗ್‌ನಲ್ಲಿ ಬಹುದೂರ ಸಿಕ್ಸರ್ ಮುಟ್ಟಿತು ಎಂದು ಗವಾಸ್ಕರ್ ಬಣ್ಣಿಸಿದರು.
 
ಮನೋಜ್ಞ ಜಯದಿಂದಾಗಿ ಆರ್‌ಸಿಬಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿಯಿಂದ ಒಂದು ಹೆಜ್ಜೆ ಹಿಂದಿದೆ. ಗುಜರಾತ್ ಲಯನ್ಸ್ ದೆಹಲಿಯಲ್ಲಿ ಫೈನಲ್ ತಲುಪುವುದಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆಲ್ಲಬೇಕಾಗಿದೆ.
 
 ಕೊಹ್ಲಿಯ ಆಟದ ಬದ್ಧತೆ ಮೇಲ್ಮಟ್ಟದಲ್ಲಿದೆ. ಹೊಲಿಗೆಗಳನ್ನು ಹಾಕಿದ್ದರೂ ಅತ್ಯುತ್ತಮ ಫೀಲ್ಡಿಂಗ್ ಮಾಡಿದರೆಂದು ಹೊಗಳಿದರು. ಆರ್‌ಸಿಬಿ 9ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೆ ಏರುವ ಫೇವರಿಟ್ ತಂಡವೆನಿಸಿದೆ ಎಂದು ಗವಾಸ್ಕರ್ ವಿಶ್ಲೇಷಿಸಿದರು. 
ಆರ್‌ಸಿಬಿ ಅತ್ಯುತ್ಕೃಷ್ಟ ಕ್ರಿಕೆಟ್ ಆಡುತ್ತಿದ್ದು, ಚಾಂಪಿಯನ್ನರಾಗಿ ಹೊರಹೊಮ್ಮಬಹುದೆಂದು ಭಾವಿಸುವುದಾಗಿ ಗವಾಸ್ಕರ್ ಹೇಳಿದರು.
 
ಈ ನಡುವೆ, ಮಾಜಿ ಓಪನರ್ ಆಕಾಶ್ ಚೋಪ್ರಾ ಅವರು ಸುರೇಶ್ ರೈನಾ ನಾಯಕತ್ವ ಕುರಿತು ಟೀಕಿಸಿದರು. ಐಪಿಎಲ್ 9 ಫೈನಲ್‌ ಪ್ರವೇಶಿಸುವ ಅತ್ಯುತ್ತಮ ಅವಕಾಶವನ್ನು ಲಯನ್ಸ್ ಕಳೆದುಕೊಂಡಿತು ಎಂದರು. ರೈನಾ ಬೌಲಿಂಗ್ ಬದಲಾವಣೆಗಳು ತಪ್ಪಾಗಿದ್ದವು ಎಂದು ಹೇಳಿದರು. ಲಯನ್ಸ್‌ಗೆ ಫೈನಲ್ ಪ್ರವೇಶದ ಹಾದಿ ಕಠಿಣವಾಗಿದೆ. ಇದೊಂದು ಉತ್ತಮ ಅವಕಾಶ ಕಳೆದುಕೊಂಡಿತು ಎಂದು ಚೋಪ್ರಾ ಹೇಳಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ