ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಹುಡುಗಿಯರಲ್ಲಿ ಹಲವು ಲೆಕ್ಕಾಚಾರಗಳಿರುತ್ತವೆ. ಹಾಗಿದ್ದರೂ ಕೆಲವೊಮ್ಮೆ ಲೆಕ್ಕಾಚಾರಗಳು ತಪ್ಪಾಗುತ್ತವೆ. ಹಾಗಾಗಿ ಮದುವೆಗೆ ಮೊದಲು ನಿಮ್ಮ ಹುಡುಗನಲ್ಲಿ ಇಂತಹ ಲಕ್ಷಣಗಳಿದ್ದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಸಂಶಯ ಪ್ರವೃತ್ತಿ
ಮದುವೆಗಿಂತ ಮೊದಲು ಭಾವೀ ಪತಿಯ ಸ್ವಭಾವ ಅರಿಯಿರಿ. ಆತನೊಂದಿಗೆ ಸುತ್ತಾಡುವಾಗ ಆತ ಪ್ರಶ್ನೆ ಮಾಡುವ ರೀತಿ, ಯಾವುದಾದರೂ ವಿಚಾರದ ಬಗ್ಗೆ ನಿಮ್ಮಿಂದ ತಿಳಿದುಕೊಳ್ಳುವ ರೀತಿಯಲ್ಲಿ ನಿಮಗೆ ಆತ ವಿಪರೀತ ಡೌಟು ಪಡುವ ಹುಡುಗ ಎನಿಸಿದ್ದರೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.
ಹಣಕಾಸಿನ ವಿಷಯ
ಹಣಕಾಸಿನ ವಿಚಾರವಾಗಿ ಮದುವೆಗಿಂತ ಮೊದಲೇ ಇಬ್ಬರೂ ನಿರ್ಧರಿಸಿಕೊಳ್ಳುವುದಿದ್ದರೆ, ಆತ ಯಾವ ರೀತಿ ಮಾತನಾಡುತ್ತಾನೆ ಎನ್ನುವುದನ್ನು ಗಮನಿಸಿ. ನಿಮ್ಮ ವೇತನದ ಬಗ್ಗೆ, ಹಣದ ಬಗ್ಗೆ ಆತ ವಿಪರೀತ ಪ್ರಶ್ನೆ ಮಾಡುವುದು, ಡಿಮ್ಯಾಂಡ್ ಮಾಡುವುದು ಮಾಡುತ್ತಿದ್ದರೆ, ಅಂತಹವರಿಂದ ದೂರವಿರುವುದೇ ಒಳ್ಳೆಯದು.
ಕುಟುಂಬದವರ ಮೇಲೆ ಗೌರವ
ಮದುವೆಗಿಂತ ಮೊದಲು ಆತ ನಿಮ್ಮ ಪೋಷಕರು ಮತ್ತು ಆತನ ಕುಟುಂಬದವರ ಜತೆ ಹೇಗೆ ವರ್ತಿಸುತ್ತಾನೆ ಎನ್ನುವುದು ಮುಖ್ಯ. ಅತಿಯಾದ ನಯ ನಡವಳಿಕೆಯೂ ಒಳ್ಳೆಯದಲ್ಲ. ಹಾಗಂತ ನಿಮ್ಮ ಪೋಷಕರು, ಕುಟುಂಬದವರಿಂದ ದೂರವಿರಲು ಮತ್ತು ನಿಮ್ಮನ್ನೂ ದೂರವಿರುವಂತೆ ಪರೋಕ್ಷವಾಗಿ ನಡೆದುಕೊಳ್ಳುತ್ತಿದ್ದರೆ ಹುಷಾರಾಗಿರಿ.
ಸಂಬಂಧ ಯಾಂತ್ರಿಕವಲ್ಲ
ಗಂಡ-ಹೆಂಡಿರ ಸಂಬಂಧ ವ್ಯವಹಾರ ಅಥವಾ ಯಾಂತ್ರಿಕವಲ್ಲ. ಆತ ನಿಮಗೆ, ನಿಮ್ಮ ಭಾವನೆಗಳಿಗೆ, ಇಷ್ಟಗಳಿಗೆ ಎಷ್ಟು ಬೆಲೆ ಕೊಡುತ್ತಾನೆ ಎನ್ನುವುದನ್ನು ಗಮನಿಸಿ. ಹೆಚ್ಚು ಭಾವುಕನಾದರೂ ಕಷ್ಟವೇ. ಆದರೆ ಆತನನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಸುರಕ್ಷಿತ ಭಾವನೆ ಮೂಡಿದರೆ ಮಾತ್ರ ಮದುವೆಯಾಗಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.