ಬ್ರೆಸಿಲಿಯಾ : ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ. ಗಲ್ವಾನ್ ಕಣಿವೆಯ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.
ಬ್ರೆಜಿಲ್ನ ಸಾವೋ ಪಾಲೋದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೈಶಂಕರ್ ಈ ವೇಳೆ ಮಾತನಾಡಿ, ನಾವು 1990ರ ದಶಕದಿಂದ ಚೀನಾದೊಂದಿಗೆ ಗಡಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪಡೆಗಳನ್ನು ನಿಯೋಜಿಸುವುದನ್ನು ನಿಷೇಧಿಸುವ ಒಪ್ಪಂದ ಮಾಡಿಕೊಂಡಿದ್ದೇವೆ.
ಆದರೆ ಅವರು ಆ ಒಪ್ಪಂದವನ್ನು ನಿರ್ಲಕ್ಷಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು.
ಭಾರತ-ಚೀನಾ ನಡುವಿನ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್, ಸಂಬಂಧಗಳು ಏಕಮುಖವಾಗಿರಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಲು ಪರಸ್ಪರ ಗೌರವ ಇರುವುದು ಮುಖ್ಯ. ಅವರು ನಮ್ಮ ನೆರೆಹೊರೆಯವರು. ಪ್ರತಿಯೊಬ್ಬರೂ ನೆರೆಹೊರೆಯವರೊಂದಿಗೆ ಬೆರೆಯಲು ಬಯಸುತ್ತಾರೆ. ಅದು ವೈಯಕ್ತಿಕ ಜೀವನ, ದೇಶಗಳ ನಡುವೆಯೂ ಅನ್ವಯಿಸುತ್ತದೆ ಎಂದರು.