ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 13 ವಿಕೆಟ್ ಪಡೆದು ಮಿಂಚಿದ ಕರ್ನಾಟಕದ ಕುವರಿ, ಬಲಗೈ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜೂನ್ ಮತ್ತು ಜುಲೈನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಮೂರು ಮಾದರಿಯ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ದಕ್ಷಿಣ ಆಫ್ರಿಕಾ ವನಿತಾ ತಂಡವು ಭಾರತದಲ್ಲಿ ಒಂದು ಟೆಸ್ಟ್, ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಡಲಿದೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದಡಿಯಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸ್ಮೃತಿ ಮಂದನಾ ಅವರು ಉಪ ನಾಯಕಿಯಾಗಿರಲಿದ್ದಾರೆ. ಜೂನ್ 16ರಂದು ಏಕದಿನ ಸರಣಿಯೊಂದಿಗೆ ಕೂಟ ಆರಂಭವಾಗಲಿದೆ. ಜೂನ್ 28ರಂದು ಟೆಸ್ಟ್ ಪಂದ್ಯ ನಡೆಯಲಿದೆ. ಜುಲೈ 5ರಿಂದ ಟಿ20 ಸರಣಿ ಆರಂಭವಾಗಲಿದೆ.
ಬಾಂಗ್ಲಾ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಆಶಾ ಶೋಭನಾ ಅವರು ಏಕದಿನ ಸರಣಿಗೆ ಮೊದಲ ಬಾರಿಗೆ ಕರೆ ಪಡೆದಿದ್ದಾರೆ. ವರ್ಷದ ಬಳಿಕ ಪ್ರಿಯಾ ಪುನಿಯಾ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಕದಿನ ಪಂದ್ಯಗಳು ನಡೆಯಲಿದ್ದು, ಟೆಸ್ಟ್ ಮತ್ತು ಟಿ20 ಪಂದ್ಯಗಳು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ಏಕದಿನ ಸರಣಿಗೆ ಭಾರತದ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭಾನಾ, ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪುನಿಯಾ.