ನನ್ನ ತಾಯಿಗೆ ಏನಾದ್ರೂ ಆದ್ರೆ ಯಾರನ್ನೂ ಬಿಡಲ್ಲ: ಆಂಕರ್ ಅನುಶ್ರೀ
ಗುರುವಾರ, 9 ಸೆಪ್ಟಂಬರ್ 2021 (20:40 IST)
ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮಾಧ‍್ಯಮಗೋಷ್ಠಿಯಲ್ಲಿ ಮಾತನಾಡಿದ ಆಂಕರ್ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೆಸರು ಕೈ ಬಿಟ್ಟಿದ್ದಕ್ಕೆ ಪ್ರಭಾವಿಗಳ ಒತ್ತಡ ಕಾರಣ, ತಾವು ಮುಂಬೈಗೆ ಓಡಿ ಹೋಗಿರುವುದಾಗಿ ಬಂದಿರುವ ವರದಿಗಳಿಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.
ನಾನು ಸೋಮವಾರ ಮುಂಬೈಗೆ ನನ್ನ ಕೆಲಸದ ಮೇರೆಗೆ ಹೋಗಿ ಅದೇ ದಿನ ವಾಪಸ್ ಬಂದಿದ್ದೇನೆ. ಎಲ್ಲೂ ಓಡಿ ಹೋಗಿಲ್ಲ. ನನಗೆ ಯಾವ ಪ್ರಭಾವಿಗಳೂ ಗೊತ್ತಿಲ್ಲ. ಯಾರನ್ನೂ ಪ್ರಕರಣದಿಂದ ಕೈ ಬಿಡಲು ಒತ್ತಡ ಹೇರಿಲ್ಲ. ನನ್ನ ವಿಚಾರಣೆ ಮಾಡಿದಾಗ ಕಾನೂನು ಪ್ರಕಾರ ಏನು ಹೇಳಬಹುದೋ ಅದನ್ನು ಅವರಿಗೆ ಹೇಳಿದ್ದೇನೆ. ಅದನ್ನು ನಾನು ಸಾರ್ವಜನಿಕವಾಗಿ ಹೇಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು, ತಮ್ಮ ಮೇಲೆ ಪ್ರಶಾಂತ್ ಸಂಬರಗಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅನುಶ್ರೀ, ನನ್ನ ಮೇಲೆ ಅವರು ಆರೋಪ ಮಾಡಿದ್ದರ ಬಗ್ಗೆ ಅವರನ್ನೇ ಕೇಳಿ. ಹಲವು ಆರೋಪಗಳು ಬರುತ್ತವೆ. ಆದರೆ ಅದೆಲ್ಲಾ ನಿಜವಾಗಲ್ಲ. ನಾನು ಈಗ ವಾಸವಾಗಿರುವುದು ಬಾಡಿಗೆ ಮನೆ. ಮಂಗಳೂರಿನಲ್ಲಿ ಒಂದು ಮನೆ ಇದೆ, ಅದರ ಲೋನ್ ಬಾಕಿದೆ ಇದೆ. ನಾನು ಒಬ್ಬಳೇ ಇಲ್ಲಿಗೆ ಬಂದಿದ್ದೇನೆ, ನನ್ನ ಕೆಲಸ ಮಾಡುತ್ತಿದ್ದೇನೆ, ಒಬ್ಬಳೇ ಹೋರಾಡುತ್ತೇನೆ ಎಂದಿದ್ದಾರೆ.
ಇನ್ನು, ಕಳೆದ ಎರಡು ದಿನಗಳಿಂದ ಟಿವಿ ವಾಹಿನಿಗಳಲ್ಲಿ ತಮ್ಮ ಬಗ್ಗೆ ಬರುತ್ತಿರುವ ವರದಿಗಳಿಂದ ನನ್ನ ತಾಯಿಗೆ, ಕುಟುಂಬಕ್ಕೆ ತೀವ್ರ ಬೇಸರವಾಗಿದೆ. ಅವರಿಗೆ ಈಗ 60 ವರ್ಷ. ಈ ಘಟನೆಗಳಿಂದ ಅವರಿಗೆ ಏನಾದರೂ ಆದರೆ ಅವನು ಯಾವನೇ ಆಗಿರ್ಲಿ ಸುಮ್ನೇ ಬಿಡಲ್ಲ ಎಂದು ಅನುಶ್ರೀ ಎಚ್ಚರಿಕೆ ನೀಡಿದ್ದಾರೆ.