ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅವರನ್ನು ಕರೆದೊಯ್ಯಲು ಸಿದ್ಧತೆ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರಿಗೆ ಬೆನ್ನು ನೋವು ತಕ್ಕಮಟ್ಟಿಗೆ ಸುಧಾರಣೆಯಾಗಿದೆ. ಮೊನ್ನೆಯಷ್ಟೇ ಜಾಮೀನು ಪ್ರಕ್ರಿಯೆ ಮುಗಿಸಲು ತಾವೇ ಕೋರ್ಟ್ ಗೆ ತೆರಳಿದ್ದರು. ಬಳಿಕ ಆಸ್ಪತ್ರೆಗೇ ಮರಳಿದ್ದರು.
ಕೋರ್ಟ್ ಗೆ ತೆರಳುವಾಗ ಅವರು ಸುಧಾರಿಸಿದ್ದು ಕಂಡುಬಂದಿತ್ತು. ಇದೀಗ ಶಸ್ತ್ರಚಿಕಿತ್ಸೆಯಿಲ್ಲದೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದರೆ. ಇನ್ನು ಕೆಲವು ದಿನಗಳ ಕಾಲ ಅವರು ಆಗಾಗ್ಗೆ ಫಿಸಿಯೋ ಥೆರಪಿ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಪ್ರಕ್ರಿಯೆಗಳು ನಡೆಯುತ್ತಿವೆ. ಇದಕ್ಕಾಗಿ ಸ್ವತಃ ಪತ್ನಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ತಮ್ಮ ಹೊಸಕೆರೆಹಳ್ಳಿ ಅಪಾರ್ಟ್ ಮೆಂಟ್ ಗೆ ದರ್ಶನ್ ರನ್ನು ಕರೆದೊಯ್ಯುವ ಸಾಧ್ಯತೆಯಿದೆ. ನಿನ್ನೆಯಷ್ಟೇ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಕೂಡಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಬೇರೆ ದಾರಿಯಿಲ್ಲ ಎಂಬ ಕಾರಣ ನೀಡಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ಈಗ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೇ ಮನೆಗೆ ಮರಳುತ್ತಿದ್ದಾರೆ. ಇದೀಗ ರೆಗ್ಯುಲರ್ ಬೇಲ್ ಸಿಕ್ಕಿರುವುದರಿಂದ ದರ್ಶನ್ ನಿರಾಳರಾಗಿದ್ದಾರೆ.