ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ , ಕಲಬುರಗಿ ನಗರ ಹೊರವಲಯದ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಪ್ರಾಯೋಗಿಕ ವಿಮಾನ ಹಾರಾಟದ ಸಿದ್ಧತೆಗಳನ್ನು ಪರಿಶೀಲಿಸಿದರು.
ಕಲಬುರಗಿ ನಗರಕ್ಕೆ ಪ್ರಪ್ರಥಮ ಬಾರಿಗೆ ವಿಮಾನಗಳು ಬಂದಿಳಿಯುತ್ತಿವೆ. ಇದನ್ನು ನೋಡಲು ಸಾರ್ವಜನಿಕರಲ್ಲಿ ಕುತೂಹಲವಿದ್ದು, ಪ್ರಾಯೋಗಿಕ ವಿಮಾನ ಹಾರಾಟ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮಾರ್ಗವನ್ನು ಗುರುತಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಯಾವುದೇ ತರಹದ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ತರಬಾರದೆಂದು ಮನವಿ ಮಾಡಿದರು.
ಹೈದ್ರಾಬಾದ್‍ನಿಂದ ಭಾನುವಾರ ಬೆಳಿಗ್ಗೆ 10.30 ರಿಂದ 11 ಗಂಟೆಯೊಳಗಾಗಿ ಒಂದು ವಿಮಾನ ಹಾಗೂ ಬೆಳಿಗ್ಗೆ 11 ರಿಂದ 11.15 ಗಂಟೆಯೊಳಗಾಗಿ ಇನ್ನೊಂದು ವಿಮಾನ ಹೀಗೆ ಎರಡು ವಿಮಾನಗಳು ಬಂದಿಳಿಯಲಿವೆ. ಈ ವಿಮಾನಗಳು ಮರಳಿ ಮಧ್ಯಾಹ್ನ 12 ಗಂಟೆಗೆ ಹಾಗೂ 12.30 ಗಂಟೆಗೆ ಟೇಕಾಫ್ ಆಗಲಿವೆ. ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಮಯದಲ್ಲಿ ರನ್‍ವೇ ಮೇಲೆ ಯಾವುದೇ ಪ್ರಾಣಿ ಅಥವಾ ಪಕ್ಷಿಗಳು ಇರದಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಪೊಲೀಸರು ಏರ್‍ಗನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.