ಎಸ್ಐಟಿ ಕಸ್ಟಡಿ ಅಂತ್ಯ: ಪ್ರಜ್ವಲ್ ರೇವಣ್ಣಗೆ ಮುಂದೇನು ಗತಿ

Krishnaveni K

ಸೋಮವಾರ, 10 ಜೂನ್ 2024 (10:21 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಇಂದು ಅವರ ಮುಂದಿನ ಭವಿಷ್ಯ ತೀರ್ಮಾನವಾಗಲಿದೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ಮೇ 31 ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಎಸ್ಐಟಿ ತಂಡ ಬಂಧಿಸಿತ್ತು. ಅದಾದ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮೊದಲ ಹಂತದಲ್ಲಿ ನ್ಯಾಯಾಲಯ ಅವರನ್ನು ಎಸ್ ಐಟಿ ವಶಕ್ಕೊಪ್ಪಿಸಿತ್ತು. ಈ ವೇಳೆ ಎಸ್ಐಟಿ ತಂಡ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನೆ ಮಾಡಿತ್ತು. ಆದರೆ ಎಲ್ಲದಕ್ಕೂ ಅವರು ಗೊತ್ತಿಲ್ಲ ಎಂದೇ ಉತ್ತರಿಸಿದ್ದರು.

ಎಸ್ ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಎಸ್ಐಟಿ ತಂಡ ಸ್ಥಳ ಮಹಜರು ಮತ್ತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂಬ ಕಾರಣಕ್ಕೆ ಮತ್ತಷ್ಟು ದಿನ ತಮ್ಮ ವಶಕ್ಕೊಪ್ಪಿಸಲು ಕೇಳಿಕೊಂಡಿತ್ತು. ಅದರಂತೆ ಕೋರ್ಟ್ ಜೂನ್ 10 ರವರೆಗೆ ಎಸ್ಐಟಿ ವಶಕ್ಕೊಪ್ಪಿಸಿತ್ತು.

ಇದರ ನಡುವೆ ಎಸ್ಐಟಿ ತಂಡ ಹೊಳೆನರಸೀಪುರದಲ್ಲಿರುವ ಪ್ರಜ್ವಲ್ ನಿವಾಸಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದೆ.  ಆದರೆ ಅವರ ಕಚೇರಿಯಲ್ಲಿ ಸ್ಥಳ ಮಹಜರು ನಡೆದಿಲ್ಲ. ಹೀಗಾಗಿ ಇಂದು ಎಸ್ಐಟಿ ಮತ್ತೊಮ್ಮೆ ತಮ್ಮ ವಶಕ್ಕೊಪ್ಪಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಎಸ್ಐಟಿ ಕಾರಣ ಸೂಕ್ತವೆನಿಸಿದರೆ ಕೋರ್ಟ್ ಮತ್ತೆ ಅವರನ್ನು ಎಸ್ ಐಟಿ ವಶಕ್ಕೊಪ್ಪಿಸಬಹುದು. ಇಲ್ಲವೇ ನ್ಯಾಯಾಂಗ ಬಂಧನ ವಿಧಿಸಬಹುದು. ಸದ್ಯಕ್ಕೆ ಪ್ರಜ್ವಲ್ ಗೆ ಜಾಮೀನು ಸಿಗುವುದಂತೂ ಕಷ್ಟ. ಹೀಗಾಗಿ ಅವರ ಮುಂದಿನ ಭವಿಷ್ಯವೇನಾಗಲಿದೆ ಎಂದು ಇಂದು ತೀರ್ಮಾನವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ