ವಿಧಾನಸೌಧದಲ್ಲಿಯೇ ವ್ಯಕ್ತಿಯ ಆತ್ಮಹತ್ಯೆ ಯತ್ನ?

ಸೋಮವಾರ, 24 ಜೂನ್ 2019 (15:51 IST)
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಬಾತರೂಮ್‌ನಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕೈಮಣಿಕಟ್ಟು ಮತ್ತು ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಮೂಲದ ಆರ್.ರೇವಣ್ಣ ಕುಮಾರ್ ಎಂದು ಗುರುತಿಸಲಾಗಿದೆ. ಆತನನ್ನು ಬೌರಿಂಗ್ ಆಂಡ್ ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ
 
ರೇವಣ್ಣ ಕುಮಾರ್ ವಿಧಾನಸೌಧಕ್ಕೆ ಬಂದಾಗ ಪೇಪರ್‌ಗಳ ಬಂಡಲ್‌ಗಳನ್ನು ತೆಗೆದುಕೊಂಡು ಬಂದಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಾಗ ಪಕ್ಕದಲ್ಲಿಯೇ  ಉದ್ಯೋಗಕ್ಕೆ ಸಂಬಂಧಿಸಿದಂತೆ ಪೇಪರ್‌‌ಗಳ ಬಂಡಲ್‌ಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಚಿಕ್ಕಬಳ್ಳಾಪುರದಲ್ಲಿ ಗ್ರಂಥಪಾಲಕನಾಗಿ ಸೇವೆ ಸಲ್ಲಿಸುತ್ತಿರುವ ರೇವಣ್ಣ ಕುಮಾರ್, ಇಂದು ಮಧ್ಯಾಹ್ನ 1 ರಿಂದ 1.30 ಗಂಟೆಗೆ ವಿಧಾನಸೌಧಕ್ಕೆ ಬಂದಿದ್ದಾನೆ. ಆತನ ಬಳಿ ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಡಿಸಿಪಿ ಬೆಂಗಳೂರು ಸೆಂಟ್ರಲ್ ಡಿ.ದೇವರಾಜಾ ತಿಳಿಸಿದ್ದಾರೆ.
 
ಕೈ ಮಣಿಕಟ್ಟು ಮತ್ತು ಗಂಟಲನ್ನು ಹರಿತವಾದ ಬ್ಲೇಡ್, ಚಾಕು ಅಥವಾ ಚೂಪಾದ ವಸ್ತುವಿನಿಂದ ಕತ್ತರಿಸಿಕೊಂಡಿರುವ ಸಾಧ್ಯತೆಗಳಿವೆ. ಯಾವ ಕಾರಣಕ್ಕೆ ವಿಧಾನಸೌಧಕ್ಕೆ ಬಂದರು ಅಥವಾ ಯಾರನ್ನು ಭೇಟಿಯಾಗಲು ಬಂದರು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ, ರೇವಣ್ಣ ಕುಮಾರ್ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ