ತೋಂಟದಾರ್ಯ ಮಠದ ನೂತನ ಪೀಠಾಧ್ಯಕ್ಷರ ಪದಗ್ರಹಣ

ಸೋಮವಾರ, 29 ಅಕ್ಟೋಬರ್ 2018 (17:13 IST)
ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠದ 20ನೇ ಪೀಠಾಧ್ಯಕ್ಷರಾಗಿ ನಾಗನೂರಿನ ಡಾ. ಸಿದ್ಧರಾಮ ಸ್ವಾಮೀಜಿ ಪದಗ್ರಹಣ ಮಾಡಿದ್ರು. ವಾದ್ಯ ಮೇಳಗಳ ವೈಭವದೊಂದಿಗೆ ನೂತನ ಶ್ರೀಗಳು ಪೀಠ ಅಲಂಕರಿಸಿದ್ದು, ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ.

ಗದಗದ ತೋಂಟದಾರ್ಯ ಮಠದ 19ನೇ ಪೀಠಾಧಿಪತಿ ಸಿದ್ದಲಿಂಗ ಶ್ರೀ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಡಾ. ಸಿದ್ಧರಾಮ ಸ್ವಾಮೀಜಿಗಳನ್ನು 20ನೇ ಪೀಠಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ. ಸಿದ್ದರಾಮ ಸ್ವಾಮೀಜಿ ಅವರು ಇದೀಗ ತೋಂಟದಾರ್ಯ ಮಠದ ಪೀಠಾರೋಹಣ ಮಾಡಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಂಗೀಂದ್ರ ನೇತೃತ್ವದಲ್ಲಿ ಪೀಠಾರೋಹಣ ಸಮಾರಂಭ ನಡೆಯಿತು. ತೋಂಟದಾರ್ಯ ಮಠದ ಪರಂಪರೆಯಂತೆ ಪೀಠಾರೋಹಣ ವಿಧಿ ವಿಧಾನ ನಡೆಯಿತು. ನೂತನ ತೋಂಟದ ಶ್ರೀಗಳಾದ ಡಾ. ಸಿದ್ದರಾಮ ಸ್ವಾಮೀಜಿ ಚಿನ್ನದ ದಂಡ ಹಿಡಿದು, ಬಂಗಾರದ ಪಾದುಕೆಗಳನ್ನು  ತೊಟ್ಟು ಬೆಳ್ಳಿಯ ಪೀಠದ ಮೇಲೆ ಆಸೀನರಾಗಿದ್ರು.
ನೂತನ ಪೀಠಾಧ್ಯಕ್ಷರಿಗೆ ಡಾ. ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು. ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಂಗೀಂದ್ರ ಶ್ರೀಗಳು ನಾಮಕರಣದ ವಿಧಿ ಬೋಧಿಸಿದ್ರು. ವಿವಿಧ ಮಠಾಧೀಶರಿಂದ ವಚನ ಪಠಣ ಮಾಡಲಾಯಿತು. ಈ ವೇಳೆ ಭಕ್ತರು ಜಯಘೋಷ ಹಾಕಿದ್ರು.

ಸಮಾರಂಭದಲ್ಲಿ ಶಾಸಕ ಹೆಚ್.ಕೆ. ಪಾಟೀಲ್​, ವಿಧಾನ ಪರಿಷತ್​ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ್​, ನಿಜಗುಣಾನಂದ ಸ್ವಾಮೀಜಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರ ಉಪಸ್ಥಿತರಿದ್ದರು. ಜೊತೆಗೆ ಅಪಾರ ಭಕ್ತ ಸಮೂಹ‌ ಸಮಾರಂಭಕ್ಕೆ ಸಾಕ್ಷಿಯಾಯ್ತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ